NEWSನಮ್ಮಜಿಲ್ಲೆಬೆಂಗಳೂರು

BMTC: ಸಾರಿಗೆ ನೌಕರರಿಗೆ ಹಿಂಬಾಕಿ, ವೇತನ ಹೆಚ್ಚಳ ಮಾಡದಿದ್ದರೂ ಪ್ರಯಾಣಿಕರಿಗೆ ಹೊಸ ಹೊಸ ಯೋಜನೆ ಮಾತ್ರ ನಿಂತಿಲ್ಲ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರಿ ಸಾರಿಗೆ ನೌಕರರಿಗೆ 2024ರ ಜನವರಿಯಿಂದ ಆಗಬೇಕಿರುವ ವೇತನ ಹೆಚ್ಚಳ ಹಾಗೂ ಕಳೆದ 2020ರ ಜನವರಿಯಿಂದ ಆಗಿರುವ ತೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಉಳಿಸಿಕೊಂಡಿರುವ ಸರ್ಕಾರ ನೌಕರರಿಗೆ ಸಮಸ್ಯೆ ಮೇಲೆ ಸಮಸ್ಯೆ ಇದ್ದರು ಜಾಣ ಮೌನ ತಾಳಿದೆ.

ಆದರೆ, ಸಾರ್ವಜನಿಕ ಪ್ರಯಾಣಿಕರಿಗೆ ಮಾತ್ರ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುವಲ್ಲಿ ಮಾತ್ರ ಹಿಂದೆ ಬಿದ್ದಲ್ಲ. ಹೌದು! ಎಲ್ಲವೂ ಅಂದುಕೊಂಡಂತಾದರೆ ಬರುವ ಇನ್ನೈದು ತಿಂಗಳಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಮಾತ್ರವಲ್ಲ; “ನಮ್ಮ ಮೆಟ್ರೋ’ ಕಾರ್ಡ್‌ಗಳನ್ನೂ ತೋರಿಸಿ “ನಮ್ಮ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಭಾಗ್ಯವನ್ನು ಕರುಣಿಸುತ್ತಿದೆ.

ಈಗಾಗಲೇ ನಗದು ರಹಿತ ಟಿಕೆಟ್ ವ್ಯವಸ್ಥೆ ಜಾರಿಯಾಗಿದೆ. ಇದರ ಮುಂದುವರಿದ ಭಾಗವಾಗಿ ಸುಮಾರು 10 ಸಾವಿರ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ಇಟಿಎಂ) ಗಳನ್ನು ಅಳವಡಿಸಿಕೊಳ್ಳಲು ಬಿಎಂಟಿಸಿ ಮುಂದಾಗಿದೆ. ಈ ಸಂಬಂಧ ಟೆಂಡ‌ರ್ ಆಹ್ವಾನಿಸಿದೆ. ಹಲವು ಕಂಪನಿಗಳು ಇದರಲ್ಲಿ ಭಾಗವಹಿಸಿದ್ದು, ಇದೇ ಮೇ 13ರಂದು ಟೆಂಡ‌ರ್ ಕೂಡ ಕೊನೆಗೊಂಡಿದೆ.

ಇನ್ನು ಈ ಟೆಂಡ‌ರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಇಟಿಎಂಗಳ ತಯಾರಿಕೆ ಮತ್ತು ಪೂರೈಕೆ ಪ್ರಕ್ರಿಯೆ ಶುರುವಾಗಲಿದೆ. ಬರುವ ಅಕ್ಟೋಬ‌ರ್-ನವೆಂಬರ್ ವೇಳೆಗೆ ಈ ಇಟಿಎಂಗಳು ಬಿಎಂಟಿಸಿ ಬಸ್ ನಿರ್ವಾಹಕರ ಕೈಸೇರಲಿವೆ. ಈಗಾಗಲೇ ಈ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಜಾರಿಗೊಳಿಸಿದೆ.

ಬಿಎಂಟಿಸಿಯಲ್ಲಿ ಕೂಡ ಈಗಾಗಲೇ ಸ್ಟಾಟಿಕ್ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಾವತಿಸಿ ಪ್ರಯಾಣಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ವ್ಯವಸ್ಥೆಯಲ್ಲಿ ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಟಿಕೆಟ್ ನೀಡುವ ವ್ಯವಸ್ಥೆ ಇಲ್ಲ.

ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬಿಎಂಟಿಸಿ ಆ್ಯಂಡ್ರಾಯ್ಡ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರ (ಇಟಿಎಂ)ಗಳನ್ನು ನೀಡಲಾಗುತ್ತಿದ್ದು, ಇದಕ್ಕೆ ಗೂಗಲ್ ಪೇ, ಫೋನ್ ಪೇ, ಭೀಮ್‌ನಂತಹ ಯುಪಿಐ ಡೈನಮಿಕ್ ಕ್ಯೂ ಆರ್ ಕೋಡ್ ವ್ಯವಸ್ಥೆ ಜತೆಗೆ ಮೆಟ್ರೋ ಕಾರ್ಡ್, ಡೆಬಿಟ್, ಕ್ರೆಡಿಟ್, ವೀಸಾ, ಕೇಂದ್ರ ಸರ್ಕಾರದ ನ್ಯಾಷನಲ್ ಕಾಮನ್‌ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಸೇರಿದಂತೆ ಎಲ್ಲ ಬಗೆಯ ಕಾರ್ಡ್‌ಗಳಿಂದ ಟಿಕೆಟ್ ಪಡೆಯಬಹುದು.

ವಿಶೇಷವೆಂದರೆ ಟಿಕೆಟ್ ವೇಗವಾಗಿ ಮುದ್ರಣ ವಾಗುತ್ತದೆ. ಟಚ್ ಸ್ಕ್ರೀನ್‌ ಮತ್ತು ವೇಗದ ಪ್ರಕ್ರಿಯೆ ವ್ಯವಸ್ಥೆಗಳನ್ನು ಈ ಸ್ಮಾರ್ಟ್ ಇಟಿಎಂ ಹೊಂದಿರಲಿದ್ದು, ಡೈನಮಿಕ್ ಕ್ಯೂ ಆರ್ ಕೋಡ್ ಆಧಾರಿತ ಪಾವತಿ ಸುಲಭವಾಗಿ ಟಿಕೆಟ್ ನೀಡುವುದಕ್ಕೆ ಅನುಕೂಲವಾಗಲಿದೆ. ಈ ಟೆಂಡರ್‌ನಲ್ಲಿ ಹಲವು ಕಂಪನಿಗಳು ಭಾಗವಹಿಸಿದ್ದು, ಕಡಿಮೆ ದರದಲ್ಲಿ ಯಂತ್ರ ನೀಡಲು ಮುಂದಾಗುವ ಕಂಪನಿ ಬಳಿ ಸ್ಮಾರ್ಟ್ ಇಟಿಎಂ ಯಂತ್ರವನ್ನು ಪಡೆಯಲಾಗುವುದು. ಬಾಡಿಗೆ ಆಧಾರದಲ್ಲಿ ಈ ಯಂತ್ರಗಳ ಸೇವೆ ಇರಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಟಿಕೆಟ್ ಬೇಗ ಮುದ್ರಣ- ಸಚಿವ ರಾಮಲಿಂಗಾರೆಡ್ಡಿ: ಬಸ್ ಭರ್ತಿಯಾದಾಗ ಎಲ್ಲರಿಗೂ ಟಿಕೆಟ್ ಹಾಗೂ ಚಿಲ್ಲರೆ ಕೊಡುವುದು ನಿರ್ವಾಹಕರಿಗೆ ಹೆಚ್ಚಿನ ಸಮಯ ಹಿಡಿಯುವುದಲ್ಲದೆ, ತ್ರಾಸದಾಯಕವಾಗಿದೆ. ಕೆಲವು ಬಾರಿ ಚಿಲ್ಲರೆ ವಿಷಯಕ್ಕೆ ಪ್ರಯಾಣಿಕರು ನಿರ್ವಾಹಕ ನಡುವೆ ಜಗಳ ನಡೆದ ಘಟನೆಗಳೂ ಇವೆ. ಹಿಂದೆ ಇಟಿಎಂ ಪರಿಚಯಿಸುವ ಮೂಲಕ ಟಿಕೆಟ್ ನೀಡುವ ಪದ್ಧತಿಯನ್ನು ಕೊನೆಗೊಳಿಸಿತ್ತು.

ಈಗ ಹಳೆಯ ಮಷಿನ್‌ಗಳ ಬದಲಾಗಿ ಆಧುನಿಕ ತಂತ್ರಜ್ಞಾನ ಇರುವ ಸುಧಾರಿತ ಮಷಿನ್‌ಗಳನ್ನು ಜಾರಿಗೊಳಿಸಲು ಸಂಸ್ಥೆ ಮಹತ್ವದ ಹೆಜ್ಜೆ ಇರಿಸಿದ್ದು, ಅಕ್ಟೋಬ‌ರ್ ಅಥವಾ ನವೆಂಬರ್ ಒಳಗೆ ಸುಧಾರಿತ ಇಟಿಎಂ ಯಂತ್ರ ನಿರ್ವಾಹಕರ ಕೈ ಸೇರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ನಗದು ರಹಿತ ಟಿಕೆಟ್ ವ್ಯವಸ್ಥೆ ಜಾರಿಗಾಗಿ ಬಾಡಿಗೆ ಆಧಾರದಲ್ಲಿ 10 ಸಾವಿರ ಸುಧಾರಿತ ಆಧುನಿಕ ತಂತ್ರಜ್ಞಾನ ಇರುವ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ಇಟಿಎಂ) ಗಳನ್ನು ಬಿಎಂಟಿಸಿಯಲ್ಲಿ ಅನುಷ್ಠಾನಗೊಳಿಸಲು ಈಗಾಗಲೇ ಟೆಂಟ‌ರ್ ಕರೆಯಲಾಗಿದ್ದು ಅದು ಕೂಡ ಮೇ 13ರಂದು ಕೊನೆಗೊಂಡಿದೆ.

ಇನ್ನು ಈ ಟೆಂಡರ್‌ನಲ್ಲಿ ಕಡಿಮೆ ದರದಲ್ಲಿ ಯಂತ್ರ ನೀಡಲು ಮುಂದಾಗಿರುವ ಕಂಪನಿಯಿಂದ ಹಂತ ಹಂತವಾಗಿ ಇಟಿಎಂಗಳನ್ನು ಖರೀದಿಸಿ ಅಕ್ಟೋಬರ್ ಅಥವಾ ನವೆಂಬ‌ರ್ ಒಳಗೆ ನಿರ್ವಾಹಕರಿಗೆ ನೀಡುತ್ತೇವೆ. ಹಿಂದೆ ಟಿಕೆಟ್ ಮುದ್ರಣವಾಗಲು ತಡವಾಗುತ್ತಿತ್ತು. ಆದರೆ, ಈ ಹೊಸ ಸ್ಮಾರ್ಟ್ ಇಟಿಎಂ ಯಂತ್ರದಲ್ಲಿ ಟಿಕೆಟ್ ಬೇಗ ಮುದ್ರಣವಾಗುತ್ತದೆ. ಇದರಿಂದ ನಿರ್ವಾಹಕರಿಗೆ ಕಿರಿಕಿರಿ ಉಂಟಾಗುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Megha
the authorMegha

1 Comment

  • ಸರ್ಕಾರದವರು ಏನೇ ಯೋಜನೆ ಮಾಡಿ ಎಲ್ಲರಿಗೂ ಫ್ರೀ ಕೊಟ್ಟು ಹಾಳಾಗಿ ಹೋಗ್ಲಿ, ಮೊದಲು ದುಡಿಯುವ ನೌಕರರಿಗೆ ಸರಿ ಸಮಾನ ವೇತನ ಕೊಟ್ಟು ಮಾತನ್ನು ಉಳಿಸಿಕೊಳ್ಳಿ ,ಇಲ್ಲಾಂದ್ರೆ ಅವನು ಯಡಿಯೂರಪ್ಪಗೆ ಬಂದ ಗತಿಯೇ ನಿಮಗೂ ಬರುತ್ತೆ

Leave a Reply

error: Content is protected !!