NEWSನಮ್ಮರಾಜ್ಯರಾಜಕೀಯ

ಆಮ್‌ ಆದ್ಮಿ ಪಾರ್ಟಿಗೆ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಬ್ರಿಜೇಶ್‌ ಕಾಳಪ್ಪ ಸೇರ್ಪಡೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಬ್ರಿಜೇಶ್‌ ಕಾಳಪ್ಪ ಆಮ್‌ ಆದ್ಮಿ ಪಾರ್ಟಿಗೆ ಸೋಮವಾರ ಸೇರ್ಪಡೆಯಾದರು.

ಬೆಂಗಳೂರಿನ ಹೊಟೇಲ್‌ ಪರಾಗ್‌ನಲ್ಲಿ ಇಂದು ಆಯೋಜಿಸಿದ್ದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಎಎಪಿಯ ಕರ್ನಾಟಕ ಉಸ್ತುವಾರಿ ದಿಲೀಪ್‌ ಪಾಂಡೆ ಬ್ರಿಜೇಶ್‌ ಕಾಳಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ನಂತರ ಬ್ರಿಜೇಶ್‌ ಕಾಳಪ್ಪ ಅವರನ್ನು ಸ್ವಾಗತಿಸಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ದೇಶದಲ್ಲಿ ಉತ್ತಮ ಬದಲಾವಣೆ ತರಬೇಕೆಂಬ ಹಂಬಲವಿರುವ ನಾಯಕರಲ್ಲಿ ಬ್ರಿಜೇಶ್‌ ಕಾಳಪ್ಪ ಒಬ್ಬರು. ರಾಜಕೀಯ ಹಾಗೂ ಆಡಳಿತದಲ್ಲಿ ಆಮ್‌ ಆದ್ಮಿ ಪಾರ್ಟಿಯು ಬದಲಾವಣೆ ತಂದಿರುವುದನ್ನು ಮನಗಂಡು ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಇನ್ನು ಜನಪರ ಕಾಳಜಿಯಿರುವವರಿಗೆ ಹಾಗೂ ದೇಶದ ಭವಿಷ್ಯಕ್ಕಾಗಿ ದುಡಿಯುವ ಹಂಬಲ ಇರುವವರಿಗೆ ಎಎಪಿಯು ಉತ್ತಮ ವೇದಿಕೆಯಾಗಿದ್ದು, ಇದನ್ನು ಇನ್ನಷ್ಟು ನಾಯಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸಜ್ಜನ ನಾಯಕರನ್ನು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಂತಹ ಪಕ್ಷಗಳು ಮೂಲೆಗುಂಪು ಮಾಡುತ್ತಿವೆ. ಅವುಗಳಿಗೆ ಕಮಿಷನ್‌ ರೂಪದಲ್ಲಿ ಜನರ ತೆರಿಗೆ ಹಣವನ್ನು ಕೊಳ್ಳೆಹೊಡೆಯುವ ನಾಯಕರು ಬೇಕೇ ವಿನಃ ಪ್ರಾಮಾಣಿಕರು ಬೇಡ. ಹಣಬಲ ಹಾಗೂ ತೋಳುಬಲವಿಲ್ಲದ ಒಳ್ಳೆಯ ಜನರನ್ನು ಅಧಿಕಾರದಿಂದ ದೂರವಿಡಲು ಆ ಪಕ್ಷಗಳ ನಾಯಕರು ಸದಾ ಯೋಜನೆ ರೂಪಿಸುತ್ತಿರುತ್ತಾರೆ. ಇದರಿಂದಾಗಿ ಅನೇಕ ಸಜ್ಜನ ರಾಜಕಾರಣಿಗಳು ಆಮ್‌ ಆದ್ಮಿ ಪಾರ್ಟಿಯತ್ತ ಮುಖ ಮಾಡುತ್ತಿದ್ದಾರೆ. ಎಎಪಿಯ ಸತ್ಯ-ನಿಷ್ಠೆಯ ರಾಜಕಾರಣ ಹಾಗೂ ಕೊಟ್ಟ ಮಾತಿಗೆ ತಪ್ಪದಿರುವ ಗುಣವು ಒಳ್ಳೆಯ ಮನಸ್ಸುಗಳನ್ನು ಆಕರ್ಷಿಸುತ್ತಿದೆ ಎಂದು ಪೃಥ್ವಿ ರೆಡ್ಡಿ ಹೇಳಿದರು.

ವಿದ್ಯಾರ್ಥಿಯಾಗಿದ್ದಾಗಲೇ ಸಾರ್ವಜನಿಕ ಜೀವನ ಪ್ರವೇಶಿಸಿದ ಬ್ರಿಜೇಶ್‌ ಕಾಳಪ್ಪ ಅವರು ಕಾಂಗ್ರೆಸ್‌ ನಾಯಕರಾಗಿ, ಅದರ ರಾಷ್ಟ್ರೀಯ ವಕ್ತಾರರಾಗಿ, ಸುಪ್ರೀಂಕೋರ್ಟ್‌ ವಕೀಲರಾಗಿ, ಪತ್ರಕರ್ತರಾಗಿ, ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರರಾಗಿ, ಹರಿಯಾಣ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ ಸುದೀರ್ಘ ಅನುಭವ ಹೊಂದಿದ್ದಾರೆ.

ಕಾವೇರಿ, ಕೃಷ್ಣ, ಮಹದಾಯಿ ನದಿಗಳ ನೀರು ಹಂಚಿಕೆ ವಿವಾದಗಳಿಗೆ ಸಂಬಂಧಿಸಿ ಕರ್ನಾಟಕದ ಪರ ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸಿದ್ದಾರೆ. ಯಾವುದೇ ವಿಚಾರವನ್ನು ತಕ್ಷಣ ಗ್ರಹಿಸಿ, ಸೂಕ್ಷ್ಮ ವಿವೇಚನೆಯೊಂದಿಗೆ ಸತ್ಯಾಂಶವನ್ನು ಹೊರತೆಗೆಯುವ ವಿಶೇಷ ಗುಣವನ್ನು ಬ್ರಿಜೇಶ್‌ ಕಾಳಪ್ಪ ಹೊಂದಿದ್ದಾರೆ” ಎಂದು ಪೃಥ್ವಿ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಆಮ್‌ ಆದ್ಮಿ ಪಾರ್ಟಿ ಸೇರಿ ಮಾತನಾಡಿದ ಬ್ರಿಜೇಶ್‌ ಕಾಳಪ್ಪ, “ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರವು ಹೊಸಹೊಸ ಜನಪರ ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದೆ. ಗುಣಮಟ್ಟ ಆಡಳಿತ ಹೇಗಿರುತ್ತದೆ ಎಂಬುದನ್ನು ದೇಶಕ್ಕೆ ತೋರಿಸಿಕೊಡುತ್ತಿದೆ. ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದೇ ದುರಾಡಳಿತ ನೀಡುತ್ತಿರುವ ಬಿಜೆಪಿಗೆ ಸಡ್ಡು ಹೊಡೆಯುವ ಸಾಮರ್ಥ್ಯವು ಆಮ್‌ ಆದ್ಮಿ ಪಾರ್ಟಿಗಿದೆ. ಮುಂಬರುವ ವಿವಿಧ ಚುನಾವಣೆಗಳಲ್ಲಿ ಎಎಪಿ ಜಯಗಳಿಸಿ ಅಧಿಕಾರ ಹಿಡಿದರೆ ಮಾತ್ರ ದೇಶದ ಭವಿಷ್ಯ ಬಲಗೊಳ್ಳಲಿದೆ” ಎಂದು ಹೇಳಿದರು.

ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಮಾಜಿ ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಪಕ್ಷದ ಮಾಧ್ಯಮ ವಕ್ತಾರ ಕೆ. ಮಥಾಯಿ, ಪಕ್ಷದ ಮುಖಂಡರಾದ ಮೋಹನ್‌ ದಾಸರಿ, ಸಂಚಿತ್ ಸಹವಾನಿ, ಜಗದೀಶ್‌ ವಿ ಸದಂ, ಕುಶಲಸ್ವಾಮಿ,ಚನ್ನಪ್ಪಗೌಡ ನಲ್ಲೂರು , ಸುರೇಶ್ ರಾಥೋಡ್ ,ದರ್ಶನ್ ಜೈನ್ ಮತ್ತಿತರ ನಾಯಕರು, ಕಾರ್ಯಕರ್ತರು ಹಾಗೂ ಬ್ರಿಜೇಶ್‌ ಕಾಳಪ್ಪ ಅವರ ಅನೇಕ ಬೆಂಬಲಿಗರು ಭಾಗವಹಿಸಿದ್ದರು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...