
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರ 38 ತಿಂಗಳ ವೇತನ ಹಿಂಬಾಕಿ ಪಾವತಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆ ಸಂಬಂಧ ಇದೇ ಏ.5ರಂದು ಸಿಎಂ ನೌಕರರ ಸಂಘಟನೆಗಳ ಸಭೆ ಕರೆದಿದ್ದಾರೆ.
ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಸಿಎಂ ಗೃಹ ಕಚೇರಿ ಕಾವೇರಿಯಲ್ಲಿ ಏ.5ರ ಬೆಳಗ್ಗೆ 11ಗಂಟೆಗೆ ಆಯೋಜಿಸಲಾಗಿದೆ. ಹೀಗಾಗಿ ಸಭೆಗೆ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಹಾಜರಾಗಲು ಕೋರಿದ್ದಾರೆ.
ಈ ನಡುವೆ ಸ್ಥಳಾವಕಾಶದ ಲಭ್ಯತೆಯ ದೃಷ್ಠಿಯಿಂದ ಪ್ರತಿ ಕಾರ್ಮಿಕ ಸಂಘಟನೆಯಿಂದ ಒಬ್ಬ ಪದಾಧಿಕಾರಿ ಮಾತ್ರ ಹಾಜರಾಗಬೇಕು ಎಂದು ಕೆಎಸ್‌ಆರ್‌ಟಿಸಿಯ ಸಿಬ್ಬಂದಿ ಮತ್ತು ಜಾಗೃತಾ ದಳದ ನಿರ್ದೇಶಕರು ಇಂದು (ಏ.1) ಎಲ್ಲ ಸಂಘಟನೆಗಳ ಪದಾಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.
ಇನ್ನು ಈ ಸಂಬಂಧ ಸಾರಿಗೆ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆ ನೌಕರರ ಸಂಘನೆಗಳ ಒಕ್ಕೂಟದ ಪದಾಧಿಕಾರಿಗಳಿಗೆ ಆಹ್ವಾನ ಪತ್ರವನ್ನು ಇಂದು ರವಾನಿಸಿದ್ದಾರೆ.
ಏ.5ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯಲ್ಲಿ ಗುರುತಿಸಿಕೊಂಡಿರುವ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರಿಗೆ ನೌಕರರ ಒಕ್ಕೂಟದಲ್ಲಿ ಗುರುತಿಸಿಕೊಂಡಿರುವ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ನಡುವೆ ಜಂಟಿ ಕ್ರಿಯಾ ಸಮಿತಿಯವರು 4 ವರ್ಷಕ್ಕೊಮ್ಮೆ ಮಾಡುತ್ತಿರುವ ಅಗ್ರಿಮೆಂಟ್ ಆಗಬೇಕು ಎಂಬ ಒತ್ತಾಯ ಮಾಡಿದರೆ ಇತ್ತ ನೌಕರರ ಒಕ್ಕೂಟ ನಮಗೆ ಈ ನಾಲ್ಕು ವರ್ಷಕ್ಕೊಮ್ಮೆ ಆಗುತ್ತಿರುವ ಅಗ್ರಿಮೆಂಟ್ ಬೇಡ ಚುನಾವಣೆ ಸಂದರ್ಭದಲ್ಲಿ ತಾವೇ ನೌಕರರಿಗೆ ಕೊಟ್ಟಿರುವ ಭರವಸೆಯಂತೆ ಸರಿ ಸಮಾನ ವೇತನ ಜಾರಿ ಮಾಡಿ ಎಂಬ ಭಿನ್ನ ಬೇಡಿಕೆಗಳನ್ನು ಸಿಎಂ ಮುಂದೆ ಇಡಲಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ತಮ್ಮದೇ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸರಿ ಸಮಾನ ವೇತನ ಜಾರಿಮಾಡಲು ಒಪ್ಪಿಗೆ ಸೂಚಿಸುತ್ತಾರೋ ಇಲ್ಲ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಬೇಡಿಕೆಯಾದ ಅಗ್ರಿಮೆಂಟ್ ಮಾಡುವುದಕ್ಕೆ ಬಯಸುತ್ತಾರೋ ಎಂಬುದಕ್ಕೆ ಈ 5ರಂದು ಸ್ಪಷ್ಟ ಉತ್ತರ ಸಿಗದಿದ್ದರೂ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಸಿಎಂ ಸಿದ್ದರಾಮಯ್ಯ ಅವರು ಕೂಡ ಸಾರಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ವಿಪಕ್ಷ ನಾಯಕರಾಗಿದ್ದ ವೇಳೆ ನೋಡಿದ್ದು ಈ ಜಂಜಾಟವನ್ನು ದೂರ ಮಾಡಲು ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸರಿ ಸಮಾನ ವೇತನ ಮಾಡೇ ಬಿಡೋಣ ಎಂದು ಸಾರಿಗೆ ಸಚಿವರ ಬಳಿ ಒಂದು ಸುತ್ತಿನ ಮಾತುಕತೆಯನ್ನು ನಡೆಸಿರುವುದಾಗಿ ತಿಳಿದು ಬಂದಿದೆ.