
ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಡಿಪೋ 1ರ ತಾಂತ್ರಿಕ ಸಿಬ್ಬಂದಿಯೊಬ್ಬರು ಅಧಿಕಾರಿಗಳ ಕಿರುಕುಳದಿಂದ ಮನನೊಂದು ಕಳೆದ ಮಾರ್ಚ್ 7ರಂದು ಬಸ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಘಟನೆ ಮಾಸುವ ಮುನ್ನವೇ ಬೆಳಗಾವಿ ಡಿಪೋ 2ರಲ್ಲಿ ಚಾಲನಾ ಸಿಬ್ಬಂದಿಯೊಬ್ಬರು ಬಸ್ನಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಸ್ಥೆಯ ಬೆಳಗಾವಿ ಘಟಕ-2ರ ಚಾಲಕ ಬಾಲಚಂದ್ರ ಹೂಕೋಜಿ ಇಂದು ಮುಂಜಾನೆ ಬಸ್ನಲ್ಲೇ ಆತ್ಮಹತ್ಯೆ ಮಾಡಿಕೊಂಡವರು. ಬೆಳಗಾವಿ ಸಿಬಿಟಿ ಬಸ್ ನಲ್ಲಿಯೇ ಚಾಲಕ ನೇಣಿಗೆ ಕೊರಳೊಡ್ಡಿದ್ದು, ಇತ್ತ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ತಿಳಿದ ಪತ್ನಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲುಮುಟ್ಟುವಂತಿತ್ತು.
ಅಕ್ಕನ ಮಗಳ ಮದುವೆ ಇದೆ ಹೀಗಾಗಿ ರಜೆ ಕೊಡಿ ಎಂದು ಘಟಕದ ಅಧಿಕಾರಿಗಳನ್ನು ಪರಿಪರಿಯಾಗಿ ಬೇಡಿಕೊಂಡರು ರಜೆ ಕೊಟ್ಟಿಲ್ಲ. ಇದರಿಂದ ತೀವ್ರವಾಗಿ ಮನನೊಂದು ಬಸ್ ನಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಾಲಕ ಬಾಲಚಂದ್ರ ಹೂಕೋಜಿ ಅವರು ಹಲವು ದಿನಗಳಿಂದ ರಜೆ ಕೇಳುತ್ತಿದ್ದರೂ ಅವರಿಗೆ ಹಿರಿಯ ಅಧಿಕಾರಿಗಳು ರಜೆ ಕೊಟ್ಟಿಲ್ಲ. ಈಗ ತನ್ನ ಅಕ್ಕನ ಮಗಳ ಮದುವೆ ಇದೆ. ಅದಕ್ಕಾದರೂ ರಜೆಕೊಡಿ ಎಂದು ಕೇಳಿದ್ದಾರೆ. ಆದರೆ ಕಲ್ಲು ಮನಸ್ಸಿನ ಅಧಿಕಾರಿಗಳು ರಜೆ ಮಂಜೂರು ಮಾಡಿಲ್ಲ. ಇದ್ರಿಂದ ಮಾನಸಿಕವಾಗಿ ನೊಂದು ಬಸ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಲವು ತಿಂಗಳುಗಳಿಂದಲೂ ಬಾಲಚಂದ್ರ ಅವರನ್ನು ಅಧಿಕಾರಿಗಳು ಡ್ಯೂಟಿ ಮಾಡುವುದಕ್ಕೆ ಬಳಸಿಕೊಂಡಿದ್ದಾರೆ. ಆದರೆ, ರಜೆ ಕೊಡುವುದಕ್ಕೆ ಮಾತ್ರ ಗದರುತ್ತಿದ್ದರು. ರಜೆಗಾಗಿ ಡಿಪೋ ವ್ಯವಸ್ಥಾಪಕರನ್ನು ಪರಿಪರಿಯಾಗಿ ಬೇಡಿಕೊಂಡರು ಪ್ರಯೋಜನವಾಗಲಿಲ್ಲ.
ಇನ್ನು ಇದರಿಂದ ಮಾನಸಿಕವಾಗಿ ನೋವು ಅನುಭವಿಸಿದ ಚಾಲಕ ಅಧಿಕಾರಿಗಳ ಮನಸ್ಸು ಕಲ್ಲಾಗಿದಕ್ಕೆ ಭಾರಿ ನಮನೊಂದು ಖಿನ್ನತೆಗೆ ಒಳಗಾಗಿ ಬಸ್ನಲ್ಲೇ ಆತ್ಮಹತ್ಯೆ ಮಾಡಿಕೊಂಡು ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ.
ಕೆಲಸದ ಒತ್ತಡ ಜತೆಗೆ ಸಂಬಂಧಿಕರ ಸಮಾರಂಭಗಳಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂಬ ನೋವಿನಿಂದ ಬಳಲಿ ಕೊನೆಗೆ ಬೇರೆ ದಾರಿ ಕಾಣದೆ ಆತ್ಮಹತ್ಯೆ ಮಾಡಿದಕೊಂಡಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಅಧಿಕಾರಿಗಳು ಮಾನಸಿಕ ಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಮೃತ ಚಾಲಕನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಿಗಳ ಕಿರುಕುಳದಿಂದ ಈಗಾಗಲೇ ನೂರಾರು ಮಂದಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ರಾಜ್ಯ ರಸ್ತೆ ಸಾರಿಗೆಯ ನಿಗಮಗಳಲ್ಲಿ ತಿಂಗಳಿಗೆ ಒಂದೆರಡು ಇಂಥ ಪ್ರಕರಣಗಳು ನಡೆಯುತ್ತಲೇ ಇವೆ. ಆದರೂ ಅಧಿಕಾರಿಗಳ ಕಿರುಕುಳ ನಿಂತಿಲ್ಲ. ಪದೇಪದೆ ಅಧಿಕಾರಿಗಳು ಈರೀತಿ ಕಿರುಕುಳ ಕೊಡುತ್ತಿದ್ದರು ಸಂಬಂಧಪಟ್ಟ ಮೇಲಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ಸುಮ್ಮನಾಗುತ್ತಿದ್ದಾರೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕಳೆದ ಮಾರ್ಚ್ನಲ್ಲಿ KSRTC ಮೈಸೂರು ನಗರ ವಿಭಾಗದ ಚಾಲಕರು ಅಪಘಾತವಾಗಿದಕ್ಕೆ ತಮ್ಮ ನೆರವಿಗೆ ಅಧಿಕಾರಿಗಳು ಬರಲಿಲ್ಲ ಎಂದು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ನೋವು ಮಾಸುವ ಮುನ್ನವೇ ಬೆಳಗಾವಿಯ 1ನೇ ಘಟಕದ ತಾಂತ್ರಿಕ ಸಿಬ್ಬಂದಿ ಕೇಶವ ಅವರು ನೇಣಿಗೆ ಶರಣಾಗಿದ್ದರು.
ಈಗ ಬೆಳಗಾವಿ 2ನೇ ಘಟಕದ ಚಾಲಕ ಬಾಲಚಂದ್ರ ಅವರು ಕೂಡ ಬಸ್ನಲ್ಲೇ ನೇಣಿಗೆ ಕೊರಳೊಡ್ಡಿದ್ದಾರೆ. ಆದರೂ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧ ಇಲ್ಲ ಎಂಬಂತೆ ನಡೆದುಕೊಳ್ಳುತ್ತಾರೆ. ಇದು ನಿಲ್ಲಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.
ಇನ್ನು ಇದಕ್ಕೆಲ್ಲ ಕಡಿವಾಣ ಬೀಳುವುದು ಯಾವಾಗ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ಅಧಿಕಾರಿಗಳಿಂದಲೇ ಪರಿಹಾರ ಮೊತ್ತವನ್ನು ಕಟ್ಟಿಸಬೇಕು. ಆಗ ಇಂಥವರಿಗೆ ಬುದ್ಧಿ ಬರುತ್ತದೆ. ಸಾರಿಗೆ ಸಚಿವರು ಈ ಬಗ್ಗೆ ಗಮನ ಹರಿಸಬೇಕು. ನೌಕರರಿಗೆ ಕಿರುಕುಳ ಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.