ವಿಜಯಪಥ ಸಮಗ್ರ ಸುದ್ದಿ
ಹಾವೇರಿ: ವಿದ್ಯಾರ್ಥಿಗಳು ಸತತ ಓದುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಉತ್ಸಾಹ ಮತ್ತು ಧೈರ್ಯದಿಂದ ಎದುರಿಸಲು ಹಾಗೂ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲು ತಾಯಂದಿರ ಪಾತ್ರ ಬಹುಮುಖ್ಯವಾಗಿದೆ ಎಂದು ಬೆಳಗಾವಿ ವಿಭಾಗ ಮಟ್ಟದ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿ ನಿರ್ದೇಶಕರಾದ ಮಮತಾ ನಾಯಕ ಹೇಳಿದರು.
ಹಾವೇರಿ ತಾಲೂಕಿನ ಹಳೇರಿತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಇತ್ತೀಚೆಗೆ ಭೇಟಿ ನೀಡಿ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸಿ ವಿದ್ಯಾರ್ಥಿಗಳ ಪರೀಕ್ಷಾ ಪೂರ್ವತಯಾರಿ ಕುರಿತು ಸಂವಾದ ನಡೆಸಿ, ತಾಯಂದಿರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಕ್ಕಳಿಗೆ ತಾಯಂದಿರು ಮಾರ್ಗದರ್ಶನ ನೀಡಬೇಕು, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಸಹಕಾರ ನೀಡಬೇಕು. ಶಿಕ್ಷಣದಲ್ಲಿ ತಾಯಂದಿರ ಪಾತ್ರ, ಮಗುವಿನ ಶೈಕ್ಷಣಿಕ ಜೀವನದಲ್ಲಿ ಬೀರುವ ಪ್ರಭಾವ, ಅವರ ಕಲಿಕೆಗೆ ನೀಡಬೇಕಾದ ಮಹತ್ವವನ್ನು ಅನೇಕ ಉದಾಹರಣೆಗಳ ಮೂಲಕ ತಾಯಂದಿರ ಮನ ಮುಟ್ಟವಂತೆ ಹೇಳಿದರು.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್-19 ಕ್ಕೆ ಸಂಬಂಧಿಸಿದಂತೆ ಎಸ್.ಒ.ಪಿ ಅನುಷ್ಠಾನ, ತರಗತಿಯಲ್ಲಿ ವಿದ್ಯಾರ್ಥಿಗಳ ಶಿಸ್ತು, ಕಲಿಕಾ ಪೂರಕ ವಾತಾವರಣವನ್ನು ಕಲ್ಪಿಸಿರುವ ಕಾರ್ಯಕ್ಕೆ ಮುಖ್ಯ ಶಿಕ್ಷಕರ ಮತ್ತು ಸಹ ಶಿಕ್ಷಕರ ಕಾಳಜಿಯನ್ನು ಪ್ರಶಂಸಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್.ಪಾಟೀಲ ಅವರು ಮಾತನಾಡಿ, ವಿದ್ಯೆಗೆ ಬಡವ- ಶ್ರೀಮಂತ ಎಂಬ ಭೇದ – ಭಾವವಿಲ್ಲ. ಅದು ಯಾರ ಸ್ವತ್ತೂ ಅಲ್ಲ. ಯಾರು ನಿರಂತರವಾಗಿ ಪ್ರಾಮಾಣಿಕ ಪರಿಶ್ರಮದಿಂದ ಕಲಿಯಲು ಇಚ್ಛಿಸುತ್ತಾರೋ ಅವರ ಸ್ವತ್ತಾಗಬಲ್ಲದು, ಅವರೇ ಈ ನಾಡಿನ ಉನ್ನತ ದರ್ಜೆಯ ಅಧಿಕಾರಿಗಳಾಗಬಲ್ಲರು. ಇಂತಹ ಶಕ್ತಿ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಹೇಳಿದರು.
ತಾಪಂ ಸದಸ್ಯ ಎಂ.ಎಂ.ವಗ್ಗಣ್ಣನವರ, ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ಐ ಇಚ್ಚಂಗಿ, ಇ.ಸಿ.ಒ ಮಂಜುನಾಥ ಟಿ, ಎಸ್.ಡಿ.ಎಂ.ಸಿ.ಸದಸ್ಯರಾದ ಫಕ್ಕೀರೇಶ ತಿಮ್ಮಣ್ಣಣವರ, ಚನ್ನಮ್ಮ ಕೋಡಿಹಳ್ಳಿ ಇತರರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಎಂ.ಎಫ್ ಹುಳ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಳಿನ ಕೆ.ಎಸ್. ನಿರೂಪಿಸಿದರು, ಆರ್.ಬಿ ಗದಗಿನ ವಂದಿಸಿದರು.