ಭಾರಿ ಮಳೆಗೆ ಅಣೆಕಟ್ಟೆ ಕುಸಿತ: 50 ಮಂದಿ ಮೃತ, ಸಂಕಷ್ಟಕ್ಕೆ ಸಿಲುಕಿದ 2 ಲಕ್ಷ ಜನರು
ನೈರೋಬಿಯಾ: ಕೀನ್ಯಾದ ರಾಜಧಾನಿ ನೈರೋಬಿಯಾದ ಸಮೀಪದ ಗ್ರೇಟ್ ರಿಫ್ಟ್ ವ್ಯಾಲಿ ಪ್ರದೇಶದಲ್ಲಿ ಅಣೆಕಟ್ಟೆ ಕುಸಿತವಾಗಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
ಕೀನ್ಯಾದಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಡ್ಯಾಂಗಳು ಭರ್ತಿಯಾಗಿವೆ. ಅವುಗಳಲ್ಲಿ ಭರ್ತಿಯಾಗಿದ್ದ ಕಿಜಾಬೆ ಅಣೆಕಟ್ಟು ಕುಸಿದ ಪರಿಣಾಮ ಜಲಾಶಯದ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿ, ಈವರೆಗೆ 50 ಜನರು ಅಸುನೀಗಿದ್ದಾರೆ.
ಇನ್ನು ಕೀನ್ಯಾದ ರಾಜಧಾನಿ ನೈರೋಬಿಯಾದಿಂದ ಸುಮಾರು 60 ಕಿಮೀ ದೂರದಲ್ಲಿರುವ ಗ್ರೇಟ್ ರಿಫ್ಟ್ ವ್ಯಾಲಿ ಪ್ರದೇಶದ ಹಳೆಯ ಕಿಜಾಬೆ ಅಣೆಕಟ್ಟು ಕುಸಿತಗೊಂಡು ಇಂತದೊಂದು ದುರಂತ ಸಂಭವಿಸಿದೆ.
ಜಲಾಶಯ ಕುಸಿತದಿಂದ ಅಪಾರ ಪ್ರಮಾಣ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿ, ಅಲ್ಲೋಲ ಕಲ್ಲೊಲ ಸೃಷ್ಟಿಸಿದೆ. ಮನೆಗಳು ರಸ್ತೆಗಳು ಕೆಸರು ಮಯವಾಗಿವೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಅಂತ ರಕ್ಷಣಾ ಪಡೆಗಳು ತಿಳಿಸಿವೆ.
ಇನ್ನು ಜೋರು ಮಳೆಯಿಂದಾಗಿ ಪೂರ್ವ ಆಫ್ರಿಕಾದ ಹಲವು ಪ್ರದೇಶಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಟಾಂಜಾನಿಯಾದಲ್ಲಿ ಈಗಾಗಲೇ 155 ಜನರು ಮೃತಪಟ್ಟಿದ್ದಾರೆ. ಬುರುಂಡಿಯಲ್ಲಿ 2,00,000ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ದೇಶದ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.