ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕಂದಾಯ ಸಚಿವರ ಉತ್ತರವೊಂದನ್ನು ಗಮನಿಸಿದೆ. ‘ಭೂ ಮಾಫಿಯಾ ವಿರುದ್ಧ ವಿರೋಧ ಪಕ್ಷದಲ್ಲಿದ್ದಾಗ ಮಾತನಾಡಿದ ನಮಗೇ ಈಗ ಕೈಕಟ್ಟಿಹಾಕಿದಂತಾಗಿದೆ. ಅದನ್ನು ನಿಯಂತ್ರಿಸುವುದು ಅಸಾಧ್ಯ’ ಎಂದು ಸಚಿವರು ಹೇಳಿದ್ದಾರೆ. ವ್ಯವಸ್ಥೆ ಹದಗೆಟ್ಟಿರುವುದರ ಬಗ್ಗೆ ಮಾತನಾಡಿರುವ ಸಚಿವರು, ಅದರ ಹಿಂದಿನ ಕಾರಣವನ್ನೂ ಪ್ರಸ್ತಾಪಿಸಿದಿದ್ದರೆ ಚನ್ನಾಗಿರುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಭೂಮಾಫಿಯಾದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವವರು ಯಾರು? ಪಕ್ಷಗಳ ಹಿಂಬಾಲಕರು, ಬಾಲಬಡುಕರೇ ಅಲ್ಲವೇ? ಅವರಿಗೆ ಪ್ರೋತ್ಸಾಹ ಕೊಡುವಾಗ ಕೊಟ್ಟು ಈಗ ‘ನಿಯಂತ್ರಿಸಲಾಗುತ್ತಿಲ್ಲ,’ ಎಂದು ಹೇಳಿಕೊಳ್ಳುವುದು ಹೊಣೆಗೇಡಿತನ. ಇಂಥ ಮಾತುಗಳು ಭೂಮಾಫಿಯಾಕ್ಕೆ ಪ್ರೇರಕ. ಭೂಮಿ ನುಂಗುವ ದಂಧೆ ಬೆಳೆಯಲು ಎರಡೂ ರಾಷ್ಟ್ರೀಯ ಪಕ್ಷಗಳ ಪಾಲು ಸಮಾನ ಎಂದು ಕಿಡಿಕಾರಿದ್ದಾರೆ.
‘ಅಕ್ರಮದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಅವರು ಮತ್ತೆ ಅದೇ ಸ್ಥಾನದಲ್ಲಿ ಬಂದು ಕೂರುತ್ತಾರೆ,’ ಎಂದೂ ಸಚಿವರು ಹೇಳಿದ್ದಾರೆ. ಅಧಿಕಾರಿಗಳು ಈ ಮಟ್ಟಿನ ಭಂಡತನ ತೋರಲು ರಾಜಕಾರಣಿಗಳು ಹುಟ್ಟುಹಾಕಿದ ವಿಷಮ ವ್ಯವಸ್ಥೆಯೇ ಕಾರಣ. ಸರ್ಕಾರ ಅಸಹಾಯಕತೆ ಪ್ರದರ್ಶಿಸಿ, ದುರ್ವ್ಯವಸ್ಥೆ ಪ್ರೋತ್ಸಾಹಿಸದೇ ಶುದ್ಧೀಕರಣ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
ಒಂದು ಅವ್ಯವಸ್ಥೆ ವಿರುದ್ಧ ಸರ್ಕಾರ ಕಠಿಣ ನೀತಿ ರೂಪಿಸಿ ಅದನ್ನು ಜಾರಿ ಮಾಡಲು ಹೊರಟು ನಿಂತರೆ ಯಾವ ಮಾಫಿಯಾ ಏನು ಮಾಡಲು ಸಾಧ್ಯ? ಅದಕ್ಕೆ ಇಚ್ಛಾಶಕ್ತಿ ಬೇಕಷ್ಟೆ. ಸ್ವಹಿತಾಸಕ್ತಿ ಹೊಂದಿರುವವರು ಮಾತ್ರ ವ್ಯವಸ್ಥೆ ಸರಿಪಡಿಸಲಾಗದ ಮಾತಾಡುತ್ತಾರೆ. ಸರ್ಕಾರದ ಭೂಮಿ ಉಳಿಸಿಕೊಳ್ಳಲಾಗದೆ ಅಸಹಾಯಕತೆ ತೋರುವವರು ಅಧಿಕಾರದಲ್ಲಿದ್ದು ಉಪಯೋಗವೇನು ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.