ಅನ್ನದಾತರ ಶಾಪ ನಿಮಗೆ ತಟ್ಟದೆ ಬಿಡದು : ಸರ್ಕಾರಕ್ಕೆ ಮಾಜಿ ಸಿಎಂ ಎಚ್‌ಡಿಕೆ ಎಚ್ಚರಿಕೆ
ಕಲಬುರಗಿ: ರಾಜ್ಯದಲ್ಲಿ ರೈತರ ವಿವಿಧ ಬೆಳೆಗಳು ಹಾಳಾಗಿರುವುದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಕೊಡದೆ ಮೀನಮೀಷ ಎಣಿಸುತ್ತಿದೆ. ಈ ಅನ್ನದಾತರ ಶಾಪ ಬಿಜೆಪಿ ಸರ್ಕಾರ ತಟ್ಟದೆ ಬಿಡುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ತೊಗರಿ ಬೆಳೆಗಾರರು ತೊಗರಿಗೆ ಸರಿಯಅದ ಬೆಳೆ ಬೆಲೆ ಕೊಡಬೇಕು ಎಂದು ಆಹಿಸಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟ ಬೆಂಬಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿನ ರೈತ ವರ್ಗದ ಜೊತೆಗಿನ ಬಿಜೆಪಿ ಸರ್ಕಾರದ ಚೆಲ್ಲಾಟ ಒಳ್ಳೆಯದಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ತೊಗರಿ ಬೆಳೆ ಸಂಪೂರ್ಣವಾಗಿ ನೆಟೆ ರೋಗಕ್ಕೆ ತುತ್ತಾಗಿ ಹೋಗಿದೆ. ಆದರೂ ಸರ್ಕಾರ ಜಾಣ ಕುರುಡುತನ ತೋರುತ್ತಿದೆ. ಈಗಾಗಲೇ ಕಲ್ಯಾಣವೂ ಸೇರಿದಂತೆ ಎಲ್ಲ ಕಡೆಗಳಲ್ಲಿ ತೊಗರಿ ರಾಶಿ ಮಾಡುತ್ತಿರುವ ರೈತರು ಸಂಕಷ್ಟದಲ್ಲಿದ್ದಾರೆ.
ನಿರೀಕ್ಷೆ ಮಾಡಿದ್ದಷ್ಟು ಬೆಳೆ ಬಂದಿಲ್ಲ. ಕಲಬುರಗಿ, ಯಾದಗಿರಿ ಜಿಲ್ಲೆಗಳಂತೂ ರೋಗದಿಂದ ತೊಗರಿ ಹಾಳಾಗಿ ಹೋಗಿದೆ. ಈ ಸಂದರ್ಭದಲ್ಲಿ ಅವರ ನೆರವಿಗೆ ಬರಬೇಕಾದ ಸರ್ಕಾರ ಕೇವಲ ಹೇಳಿಕೆಗಳಿಗೆ ಸೀಮಿತವಾಗಿದೆ. ಅದು ಅಲ್ಲದೆ ಬೆಳೆ ವಿಮೆ ಕೂಡ ರೈತರ ಕೈ ಸೇರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಹೆಸರಿನಲ್ಲಿ ರಾಜಕೀಯ ಮಾಡಿ ಅವರಿಗೆ ಯಾವುದೇ ಅನುಕೂಲ ಮಾಡಿ ಕೊಟ್ಟಿಲ್ಲ. ಇನ್ನು 3 ತಿಂಗಳಿನಲ್ಲಿ ರಾಜ್ಯದ ಜನ ಬಿಜೆಪಿಯನ್ನು ನಿರ್ಮೂಲನ ಮಾಡ್ತಾರೆ ಎಂದು ಹರಿಹಾಯ್ದ ಅವರು, ತೊಗರಿ ಬೆಳೆಗಾರರ ಬಗ್ಗೆ ವಿಶೇಷ ಗಮನ ನೀಡಬೇಕು. ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿ ಬಂಡೆಪ್ಪ ಕಾಶೆಂಪೂರ್ ಪ್ರಸ್ತಾಪ ಮಾಡಿದ್ರು. ಆದ್ರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತರಿಗೆ ಬೆಳೆ ವಿಮೆ ಹಣ ಸಿಕ್ಕಿಲ್ಲ. ಸರ್ಕಾರದಿಂದ ಪರಿಹಾರವೂ ಸಿಕ್ಕಿಲ್ಲ. ಖಾಸಗಿ ಕಂಪನಿಗಳು ರೈತರ ಹಣ ಕೊಳ್ಳೆ ಹೊಡೆದಿವೆ. ಹೀಗಾದರೆ ರೈತರ ಗತಿ ಏನು. ರೈತರ ಆದಾಯ ದ್ವಿಗುಣ ಮಾಡುವ ಮಾತುಕೊಟ್ಟಿದ್ದ ಮೋದಿ ಅವರು ಎಲ್ಲಿ. ಅವರನ್ನು ಮುಖ್ಯಮಂತ್ರಿ ಆದಿಯಾಗಿ ಯಾವ ಸ್ಥಳೀಯ ನಾಯಕರು ಕೇಳುತ್ತೀರಿ ಎಂದು ಪ್ರಶ್ನಿಸಿದರು.
ಈ ವೇಳೆಯಲ್ಲಿ ನೆಟೆರೋಗಕ್ಕೆ ತುತ್ತಾಗಿದ್ದ ತೊಗರಿ ಗಿಡಗಳನ್ನು ಹಿಡಿದೆ ರೈತರು ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ನುಗ್ಗಿದ್ದರು. ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶಂಪೂರೆ ಸೇರಿದಂತೆ ನೂರಾರು ಕಾರ್ಯಕರ್ತರು, ರೈತ ಮುಖಂಡರು, ರೈತರು ಭಾಗವಹಿಸಿದ್ದರು.