ಬೆಳಗಾವಿ: ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ವಿಚಾರಣೆಗೆ ಒಳಪಡಿಸಬೇಡಿ ಎಂದು ಬೈಲಹೊಂಗಲದ ಮಡಿವಾಳೇಶ್ವರ ಮಠದ ಶ್ರೀ ಬಸವ ಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಚಿತ್ರದುರ್ಗದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬಳಿಕ ಮಹಿಳೆಯರಿಬ್ಬರು ಮಾತನಾಡಿದ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಹಲವು ಪ್ರತಿಷ್ಠಿತ ಸ್ವಾಮೀಜಿಗಳ ವಿರುದ್ಧ ಮಹಿಳೆಯರು ಮಾತನಾಡಿದ್ದರು.
ಈ ಆಡಿಯೋದಲ್ಲಿ ನೇಗಿನಹಾಳ ಮಠದ ಶ್ರೀ ಬಸವ ಸಿದ್ಧಲಿಂಗ ಸ್ವಾಮೀಜಿಗಳ ಹೆಸರು ಉಲ್ಲೇಖಿಸಲಾಗಿತ್ತು. ಇದಾದ ಬೆನ್ನಲ್ಲೇ ಸ್ವಾಮೀಜಿ ನೇಣು ಬಿಗಿದುಕೊಂಡು ಮಠದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿರುವುದು ಈಗ ಸಿಕ್ಕಿದ್ದು, ಅದರಲ್ಲಿ ಸ್ವಾಮೀಜಿ, ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ವಿಚಾರಣೆಗೆ ಒಳಪಡಿಸಬೇಡಿ. ಈ ಲೋಕದ ಗೊಡವೆ ಸಾಕು, ಹಡೆದ ತಾಯಿ ನನ್ನ ಕ್ಷಮಿಸು, ಮಠದ ಭಕ್ತರು ನನ್ನನ್ನು ಕ್ಷಮಿಸಿ. ನನ್ನ ನಡೆ ಮಡಿವಾಳೇಶ್ವರ ಕಡೆಗೆ. ಮಠದ ಕಮಿಟಿ, ಭಕ್ತರು ಮಠವನ್ನು ಮುನ್ನಡೆಸಿಕೊಂಡು ಹೋಗಿ ಎಂದು ಉಲ್ಲೇಖಿಸಿದ್ದಾರೆ.
ಇತ್ತ ಸ್ವಾಮೀಜಿಗಳು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ವೈರಲ್ ಆದ ಆಡಿಯೋದಲ್ಲಿ ಮಾತನಾಡಿರುವ ಮಹಿಳೆಯರ ಬಂಧನ ಆಗಬೇಕು ಎಂದು ಮಠದ ಭಕ್ತರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಡಾ.ಸಂಜೀವ ಪಾಟೀಲ್, ಎಫ್‍ಎಸ್‍ಎಲ್ ತಂಡ ಪರಿಶೀಲನೆ ನಡೆಸಿದರು. ಬಳಿಕ ಮಾಹಿತಿ ನೀಡಿದ ಎಸ್‍ಪಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.