ಬೆಂಗಳೂರು ಗ್ರಾಮಾಂತ: ಮಹಿಳೆಯು ಕುಟುಂಬದಲ್ಲಿ ಹಲವಾರು ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವುದರೊಂದಿಗೆ ಉದ್ಯೋಗ ಕ್ಷೇತ್ರದಲ್ಲೂ ಜವಬ್ದಾರಿಯುತದಿಂದ ಕಾರ್ಯನಿರ್ವಹಿಸಿ ಉತ್ತಮ ಸ್ಥಾನ ಮಾನ ಪಡೆಯುವುದು ಹೆಣ್ಣಿಗೆ ಜನ್ಮದತ್ತವಾಗಿ ಬಂದ ಒಂದು ಕಲೆಯಾಗಿದೆ. ಆದ್ದರಿಂದ ಹೆಣ್ಣಿಲ್ಲದ ಜಗತ್ತನ್ನು ಉಹಿಸುವುದೂ ಅಸಾಧ್ಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಸೇವ್ ದಿ ಚಿಲ್ಡ್ರನ್ (ಬಾಲ್ ರಕ್ಷಾ ಭಾರತ್) ಸಹಯೋಗದಲ್ಲಿ ಇಂದು ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದ್ದ “ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ” ಜಿಲ್ಲಾ ಮಟ್ಟ ಕಾರ್ಯಕ್ರಮವನ್ನು ಡೋಲು ಬಾರಿಸುವ ಮೂಲಕ ಉದ್ಟಾಟಿಸಿ ಮಾತನಾಡಿದರು.
ಮಹಿಳೆಯರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಸೇರಿದಂತೆ ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಆದರೂ ಹಲವು ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವರು ಅಭಿವೃದ್ಧಿ ಹೊಂದಲು ಸರ್ಕಾರ ಜಾರಿಗೊಳಿಸಿರುವ ಮಹಿಳಾ ಸಬಲೀಕರಣ ಕಾರ್ಯಕ್ರಮಗಳ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಅಂಗನವಾಡಿ ಕಾರ್ಯಕರ್ತೆಯ ಬಳಿ ಒಂದು ಹಳ್ಳಿಯಲ್ಲಿರುವ ಎಲ್ಲಾ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಮಾಹಿತಿ ಇರುತ್ತದೆ. ಇವರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ನಿಮ್ಮದು ಪುಣ್ಯದ ಕೆಲಸವಾಗಿದೆ ಎಂದರು.
ರಾಜ್ಯ ಮಟ್ಟದ ಮಹಿಳಾ ದಿನಾಚರಣೆ ಕಾರ್ಯಕ್ರಮದದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ನೆಲಮಂಗಲ ತಾಲ್ಲೂಕಿನ ಅನ್ನಪೂಣೇಶ್ವರಿ ಸ್ರೀ ಶಕ್ತಿ ಗುಂಪು, ದ್ವಿತಿಯ ಸ್ಥಾನ ಪಡೆದ ನೆಲಮಂಗಲ ತಾಲ್ಲೂಕು ಸ್ರೀ ಶಕ್ತಿ ಒಕ್ಕೂಟ, ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಆದಿನಾರಾಯಣ ಹೊಸಹಳ್ಳಿ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ರವರಿಗೆ ಅತ್ಯತಮ ಕಾರ್ಯಕರ್ತೆ ಪ್ರಶಸ್ತಿ ಲಭ್ಯಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿಯವರು ಅಭಿನಂದಿಸಿ, ಮಹಿಳಾ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸಿಮೀತವಾಗದೆ ಪ್ರತಿ ದಿನವು ಮಹಿಳೆಯರನ್ನು ಗೌರವಿಸುವಂತಾಗಬೇಕು ಎಂದು ಮಹಿಳಾ ದಿನಾಚರಣೆಯ ಶುಭಶಯವನ್ನು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ರವಿ.ಎಂ.ತಿರ್ಲಾಪೂರ ಅವರು ಮಾತನಾಡಿ ಮಹಿಳಾ ಸಮಾನತೆಗಾಗಿ ಹಲವು ಹೋರಾಟಗಳು ನಡೆದ ಫಲವೇ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ಕಾರಣವಾಗಿದೆ. ಜಿಲ್ಲೆಯಲ್ಲಿ ದಕ್ಷ ಮಹಿಳಾ ಅಧಿಕಾರಿಯನ್ನು ಜಿಲ್ಲಾಧಿಕಾರಿಯನ್ನಾಗಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ, ಯಾವುದೇ ಒಂದು ಮಹಿಳೆ ಸಾಧನೆ ಮಾಡಲು ತಮ್ಮ ಸ್ವಾತಂತ್ರ್ಯ, ಹಕ್ಕು, ಅಧಿಕಾರವನ್ನು ಕೇಳಿ ಪಡೆಯಬೇಕು ಎಂದರು.
ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನವು ಮೊದಲು ನಮ್ಮ ಮನೆ, ಕಚೇರಿಯಿಂದ ಪ್ರಾರಂಭವಾಗಬೇಕು, ಲಿಂಗ ಅಸಮಾನತೆ ನಿರ್ಮೂಲನೆ ಮಾಡಿ, ಸಮಾನತೆ ಸಾಧಿಸಲು ಸಮಾಜದಲ್ಲಿರುವ ಪ್ರತಿಯೊಬ್ಬರೂ ಮಹಿಳೆಯರನ್ನು ಗೌರವಿಸಿ ಅವರ ಹಕ್ಕುಗಳಿಗೆ ಚ್ಯುತಿಬಾರದಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಅವರು ಮಾತನಾಡಿ “ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ” ಎಂಬುದು ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷವಾಕ್ಯವಾಗಿದೆ. ಮಹಿಳೆಯರು ಸಮಾನತೆ ಹೊಂದಲು, ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗಬೇಕು. ಮಹಿಳೆಯರು ಶೋಷಣೆಗಳಿಗೆ ಒಳಗಾಗದೆ ಆತ್ಮಸ್ಥೈರ್ಯದಿಂದ ಧೈರ್ಯವಾಗಿ ಸಮಸ್ಯೆಗಳನ್ನು ಎದುರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಯಿ-ಮಗುವಿಗೆ ಸಂಬಂಧಿಸಿದಂತೆ ಸಾವಿರ ದಿನಗಳ ಮಹತ್ವದ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆರು ಹಾಗೂ ಸಹಾಯಕಿಯರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ಸ್ತ್ರೀ ಶಕ್ತಿ ಗುಂಪುಗಳು ಮತ್ತು ಒಕ್ಕೂಟಗಳಿಗೆ, ಕರಾಟೆಯಲ್ಲಿ ಗಿನೀಸ್ ದಾಖಲೆ ಮಾಡಿದ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ 08ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಕುಮಾರಿ ಸಿಂಧು, ಕುಮಾರಿ ಸಂಜನ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಅಂಗನವಾಡಿ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್, ಹಿರಿಯ ಭೂವಿಜ್ಞಾನಿ ಪಲ್ಲವಿ, ಸೇವ್ ದಿ ಚಿಲ್ಡ್ರನ್ ಯ ಹಿರಿಯ ವ್ಯವಸ್ಥಾಪಕ ಚಂದ್ರಶೇಖರ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.