
ಬೆಂಗಳೂರು: ದಾಸರಹಳ್ಳಿ ವಲಯದಲ್ಲಿ ಶೆಟ್ಟಿಹಳ್ಳಿ ಉಪ ವಿಭಾಗ ವಾರ್ಡ್ನ ಆರ್.ಕೆ.ಲೇಔಟ್ 3ನೇ ಕ್ರಾಸ್ ರಸ್ತೆಯಲ್ಲಿ ಅನಧಿಕೃತವಾಗಿ ರಸ್ತೆ ಅಗೆದಿರುವವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಆರ್.ಕೆ.ಲೇಔಟ್ 3ನೇ ಕ್ರಾಸ್ ರಸ್ತೆಯಲ್ಲಿ ಜ್ಯೋತಿ ಆರ್. ಎಂಬುವವರು 31ನೇ ಮಾರ್ಚ್ 2025 ರಂದು ಬೆಳಗ್ಗೆ 9.30ರ ವೇಳೆ ಅನಧಿಕೃತವಾಗಿ ರಸ್ತೆ ಅಗೆದಿರುವ ಕುರಿತು ವಲಯ ಆಯುಕ್ತ ಸತೀಶ್ ಅವರು ವಾಟ್ಸಪ್ ಗ್ರೂಪ್ ಮುಖಾಂತರ ಕಾನೂನು ಕ್ರಮ ಕೈಗೊಳ್ಳಲು ಸಂದೇಶ ರವಾನಿಸಿದ್ದಾರೆ.
ಮುಂದುವರಿದು, ಈ ವಿಷಯಕ್ಕೆ ಸಂಬಂಧಿಸಿದಂತೆ ದಾಸರಹಳ್ಳಿ ವಲಯದ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ಅವರ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಆರ್.ಕೆ.ಲೇಔಟ್ 3ನೇ ಕ್ರಾಸ್ ರಸ್ತೆಯಲ್ಲಿ ಬರುವ ಸ್ವತ್ತಿನ ಸಂಖ್ಯೆ 37ರ ಮಾಲೀಕರಾದ ಜ್ಯೋತಿ ಆರ್. ಅವರು ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ನಿಯಮಬಾಹೀರವಾಗಿ ರಸ್ತೆಯನ್ನು ಅಗೆದು ಸಾರ್ವಜನಿಕ ಸ್ವತ್ತನ್ನು ಹಾಳು ಮಾಡಿದ್ದಾರೆ.
ಆದ್ದರಿಂದ, ಅನಧಿಕೃತವಾಗಿ ರಸ್ತೆ ಅಗೆದವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸಹಾಯಕ ಕಾರ್ಯಪಾಲಕ ಅಭಿಯಂತರರು, ಶೆಟ್ಟಿಹಳ್ಳಿ ಉಪ ವಿಭಾಗ ಇವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್.ಐ.ಆರ್ ದಾಖಲಿಸಿದ್ದಾರೆ.