ರಾಜ್ ಕೋಟ್(ಗುಜರಾತ್): ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಗುಜರಾತ್ ರಾಜ್ಯದಲ್ಲಿ ಮತ್ತೆ ಸಂಭವಿಸಿದ್ದು, ದುರಂತದಲ್ಲಿ ಐವರು ಸೋಂಕಿತರು ಸಜೀವದಹನವಾಗಿದ್ದಾರೆ.
ಗುಜರಾತ್‌ನ ರಾಜ್ ಕೋಟ್ ನಗರದ ಮಾವ್ಡಿ ಪ್ರದೇಶದ ಉದಯ್ ಶಿವಾನಂದ್ ಕೋವಿಡ್-19 ಆಸ್ಪತ್ರೆಯಲ್ಲಿ ಇಂದು ನಸುಕಿನ ಜಾವ ಬೆಂಕಿ ಅವಘಡ ಉಂಟಾಗಿ ಐದು ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ಆಸ್ಪತ್ರೆಯ ಕೊರೊನಾ ಸೋಂಕಿತರಿಗೆ ಮೀಸಲಾಗಿದ್ದ ತೀವ್ರ ನಿಗಾ ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೂಲಗಳಿಂದ ಸಿಕ್ಕಿರುವ ಮಾಹಿತಿ ಆಧಾರದಂತೆ ದುರ್ಘಟನೆ ನಡೆಯುವ ವೇಳೆ ಐಸಿಯುನಲ್ಲಿ ಸುಮಾರು 11 ಮಂದಿ ಸೋಂಕಿತರಿದ್ದರು. ಅವರಲ್ಲಿ 6 ಮಂದಿಯನ್ನು ರಕ್ಷಿಸಲಾಗಿದ್ದು ಉಳಿದ ಐವರು ಅಸುನೀಗಿದ್ದಾರೆ.
ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಈ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆ ನಡೆದ ತಕ್ಷಣ ರಾಜಕೋಟ್ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದು, ಎಲ್ಲಾ ರೋಗಿಗಳನ್ನು ಸದ್ಯ ಪಕ್ಕದ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
33 ಮಂದಿ ಕೊರೊನಾ ಸೋಂಕಿತರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಅವಘಡದ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣವೇ ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಿದ್ದೇವೆ. 30 ರೋಗಿಗಳನ್ನು ರಕ್ಷಿಸಿದೆವು. ಮೂರು ರೋಗಿಗಳು ಐಸಿಯು ಒಳಗೆಯೇ ಮೃತಪಟ್ಟಿದ್ದಾರೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿ ಜೆ.ಬಿ. ತೆವಸೈಡ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ವಿಜಯ್ ರೂಪಾಣಿ ತನಿಖೆಗೆ ಆದೇಶಿಸಿದ್ದು, ಅವಘಡದಿಂದ ತೀವ್ರ ನೋವಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಗಳಿಗೆ ಪರಹಾರ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ.