ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ವಿಚಾರಣೆ ಎದರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಹೈ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ರಾಜ್ಯದಲ್ಲಿ ಇನ್ನು ಕೆಲವೆ ಕೆಲವು ದಿನಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಬರುತ್ತಿದ್ದು, ಈ ಚುನಾವಣೆಯಲ್ಲಿ ಡಿಕೆಶಿ ಅವರನ್ನು ಮಾನಸಿಕವಾಗಿ ಹಿಂಸಿಸಬೇಕು ಎಂಬ ಉದ್ದೇಶದಿಂದಲೋ ಏನೋ ಗೊತ್ತಿಲ್ಲ.
ಆದರೆ ಈ ಸಂದರ್ಭದಲ್ಲಿ ಡಿಕೆಶಿ ಮತ್ತು ಅವರ ಕುಟುಂಬದವರಿಗೆ ಸಿಬಿಐ (CBI) ನೋಟಿಸ್ ಕೊಡುತ್ತಲೇ ಇದೆ. ಹೀಗೆ ಸುಖಾಸುಮ್ಮನೆ ಹಿಂಸೆ ಕೊಡುವ ಕೆಲಸವನ್ನು ಮಾಡುತ್ತಾ ಇದ್ದಾರೆ ಎಂಬ ವಿಚಾರವನ್ನು ಶಿವಕುಮಾರ್ ಅವರ ಪರ ವಕೀಲರಾದ ಜಾದವ್ ಕೋರ್ಟ್ ಗಮನಕ್ಕೆ ತಂದಿದ್ದರು.
ಡಿಕೆಶಿ ಅವರು ಈ ಪ್ರಕರಣದಲ್ಲಿ ಆರೋಪಿ. ಆದರೆ ಅವರನ್ನು ಹೊರತುಪಡಿಸಿ ಅವರ ಪುತ್ರಿಯನ್ನು ವಿಚಾರಣೆಗೆ ಹಾಜರಾಗುವಂತೆ ಕರೆಯುತ್ತಿದ್ದಾರೆ. ಇದರಿಂದ ಅವರ ಕುಟುಂಬಕ್ಕೆ ತೊಂದರೆ ಆಗುತ್ತಿದೆ. ಚುನಾವಣೆಗೆ ಅಡ್ಡಿಪಡಿಸಬೇಕು, ಮಾನಸಿಕ ಹಿಂಸೆ ಕೊಡಬೇಕು ಅಂತಲೇ ಈ ರೀತಿ ಮಾಡಲಾಗುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಅವರ ಪುತ್ರಿ ಚುನಾವಣೆ ಸ್ಪರ್ಧೆ ಮಾಡುತ್ತಿಲ್ಲ ಅಲ್ವಾ? ವಿಚಾರಣೆಗೆ ಹಾಜರಾಗಲು ತೊಂದರೆ ಏನಿದೆ? ವಿಚಾರಣೆಗೆ ಸಹಕರಿಸಬೇಕು ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ವಾದ ಮಂಡಿಸಿ, ಡಿಕೆಶಿ ಅವರ ಮಗಳ ಹೆಸರಿನಲ್ಲಿ 150 ಕೋಟಿ ರೂ. ಆಸ್ತಿ ಇದೆ. ಅದರ ಮೌಲ್ಯ ಏನು ಅಂತ ತಿಳಿದುಕೊಳ್ಳಬೇಕು. ತನಿಖೆ ಇನ್ನೂ 6 ತಿಂಗಳು ನಡೆಯಲಿದೆ. ಬಳಿಕ ಅಂತಿಮ ವರದಿ ಸಲ್ಲಿಸಬೇಕು ಎಂದು ವಾದಿಸಿದರು.
ಈ ವೇಳೆ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ಮೂಲ ಅರ್ಜಿಯೊಂದು ವಿಚಾರಣೆಗೆ ಬಾಕಿ ಉಳಿದಿದೆ. ಅದು ಇನ್ನೂ ಇತ್ಯರ್ಥ ಆಗದೇ ಇರುವ ಹಿನ್ನೆಲೆ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ. ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು, ಫೆಬ್ರವರಿ 24ಕ್ಕೆ ತನಿಖಾ ಪ್ರಗತಿ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿದೆ.