ಮೈಸೂರು: ಇತ್ತೀಚೆಗೆ ದೇಶ ಮತ್ತು ರಾಜ್ಯದಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ಜೀವಗಳೆ ಹೋಗುತ್ತಿವೆ. ಈ ಹೊತ್ತಿನಲ್ಲೇ ಮೈಸೂರಿನಲ್ಲೊಂದು ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಸಂಸ್ಕಾರವೊಂದು ಸಮಾಜದ ಮುನ್ನೆಲೆಗೆ ಬಂದಿದೆ.
ಹಿಂದೂ ಮಹಿಳೆಯೊಬ್ಬರು ನಗರದಲ್ಲಿ ನಿಧನರಾಗಿದ್ದಾರೆ. ಈ ವೇಳೆ ಅವರ ಅಂತ್ಯಕ್ರಿಯೆಯನ್ನು ಮುಸ್ಲಿಂ ಸಮುದಾಯದವರು ಹಿಂದೂ ಸಂಪ್ರದಾಯದಂತೆ ನೆರವೇರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಹೌದು! ಶಿವಮ್ಮ ಎಂಬ ಮಹಿಳೆ ಸುಮಾರು 30 ವರ್ಷದಿಂದಲೂ ಗುಡಿಸಲೊಂದರಲ್ಲಿ ವಾಸಿಸುತ್ತಿದ್ದರು. ಆಕೆಗೆ ಮಗ, ಮಗಳು ಇದ್ದರೂ ಅವರೊಂದಿಗೆ ಹೋಗದೇ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದರು. ಆದರೆ ಆ ಮಹಿಳೆಯ ನಿಧನಹೊಂದಿದಾಗ ಶವಸಂಸ್ಕಾರ ಮಾಡಲು ಕುಟುಂಬಸ್ಧರು, ಸಂಬಂಧಿಕರಾರು ಬರದ ಕಾರಣ ವಿಷಯ ತಿಳಿದ ಒಂದಷ್ಟು ಮುಸ್ಲಿಮರು ಶಿವಮ್ಮ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲು ಮುಂದಾದರು.
ಅದಕ್ಕಾಗಿ ಸುನ್ನಿ ಚೌಕದಿಂದ ಬನ್ನಿಮಂಟಪದ ಜೋಡಿ ತೆಂಗಿನ ಮರ ರುದ್ರಭೂಮಿಗೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಬಂದಿದ್ದಾರೆ. ಈ ವೇಳೆ ಮುಸ್ಲಿಂ ಸಮದಾಯದವರೇ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದಾರೆ.
ಮುಸ್ಲಿಂ ಸಮುದಾಯದವರು ಶಿವಮ್ಮ ಅವರ ಗುಡಿಸಲ ಮುಂದೆ ಪೆಂಡಾಲ್ ಹಾಕಿ ರಾತ್ರಿಯಿಡಿ ಪಾರ್ಥಿವ ಶರೀರವಿಟ್ಟುಕೊಂಡು ಜಾಗರಣೆ ಮಾಡುತ್ತಾ ಕಾವಲಿದ್ದರು. ಬೆಳಗಾದ ಬಳಿಕ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ಮಾಡಿಕೊಂಡರು.
ಅದಕ್ಕಾಗಿ ನಗರದ ಸುನ್ನಿ ಚೌಕ್‌ನಿಂದ ಜೋಡಿ ತೆಂಗಿನ ಮರ ರುದ್ರಭೂಮಿ ವರಗೆ ಪಾರ್ಥಿವ ಶರೀರವನ್ನು ತರಲಾಗಿದೆ. ಈ ವೇಳೆ ಮುಸ್ಲಿಂ ಯುವಕರೇ ಹೆಗಲು ಕೊಟ್ಟು ಹೊತ್ತು ತಂದಿದ್ದಾರೆ. ನಂತರ ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿ ಅಂತ್ಯಕ್ರಿಯೆ ಪೂರ್ಣಗೊಳಿಸಿದ್ದಾರೆ. ಅಲ್ಲದೆ ಕೊನೆವರೆಗೂ ರುದ್ರಭೂಮಿಯಲ್ಲೇ ಇದ್ದು ಎಲ್ಲವನ್ನೂ ನೋಡಿಕೊಂಡಿದ್ದಾರೆ.
ಈ ವೇಳೆ ಎಂಸಿಸಿ ಮಾಜಿ ಕಾರ್ಪೊರೇಟರ್ ಸುಹೇಲ್ ಬೇಗ್ ಮಾತನಾಡಿ, ಮಹಿಳೆಯ ಸಂಬಂಧಿಕರು ಸಿಗದಿದ್ದಾಗ ಮುಸ್ಲಿಮರು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದರು. ಅದಕ್ಕಾಗಿ 60ಕ್ಕೂ ಹೆಚ್ಚು ಮುಸ್ಲಿಂ ಯುವಕರು ಸೇರಿಕೊಂಡು ಮೆರವಣಿಗೆ ಮೂಲಕ ಸಾಗಿದರು ಎಂದು ಹೇಳಿದ್ದಾರೆ.