ಧಾರವಾಡ: ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಹೋದ ಕಡೆಯಲೆಲ್ಲ ಅಭೂತ ಪೂರ್ವ ಬೆಂಬಲ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಆಗಮಿಸುತ್ತಿದ್ದ ಮಾರ್ಗ ಮಧ್ಯೆ ಹುಬ್ಬಳ್ಳಿಯ ಏರಪೋರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 3 ರಿಂದ ಬೀದರ್ ಭಾಗದಿಂದ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದರು.
ಇನ್ನು ಇದೇ 19ರಿಂದ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ನಾನು ಭಾಗಿಯಾಗುವುದಿಲ್ಲ. ಮುಂದಿನ 2023ರ ಫೆಬ್ರುವರಿಯಲ್ಲಿ ಬೆಳಗಾವಿ ಭಾಗದಲ್ಲಿ ನಮ್ಮ ಪಂಚರತ್ನ ಕಾರ್ಯಕ್ರಮ ಆರಂಭವಾಗಲಿದೆ. ಹೀಗಾಗಿ ಪಂಚರತ್ನ ಯಾತ್ರೆಗೆ ಸಮಯ ನಿಗದಿಯಾಗಿರುವುದರಿಂದ ನಾನು ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ. ಆದರೆ ನಮ್ಮ ಅನುಪಸ್ಥಿತಿಯಲ್ಲಿ ಬಂಡೆಪ್ಪ ಕಾಶಂಪೂರ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ ಎಂದರು.
ಬಿಜೆಪಿ ಸರ್ಕಾರ ಯಾವ ಕಾರ್ಯಕ್ರಮವೂ ಮಾಡಲಿಲ್ಲ. ಕೇವಲ ಘೋಷಣೆಗೆ ಸೀಮಿತವಾಗಿದೆ, ಬರಿ ಸಿಹಿ ಸುದ್ದಿ, ಹುಳಿ ಸುದ್ದಿ ಅಂತಾರೆ, ಬರೀ ದೊಡ್ಡ ಘೋಷಣೆ ಮಾಡೋದು ಇವರ ಕೆಲಸವಾಗಿ ಬಿಟ್ಟಿದೆ ಎಂದು ಸರ್ಕಾರದ ನಡೆಯನ್ನು ತರಾಟೆಗೆ ತೆಗೆದುಕೊಂಡರು.
ಇನ್ನು ಬೆಳಗಾವಿ ಗಡಿ ವಿವಾದ ಕುರಿತು ಮಾತನಾಡಿದ ಕುಮಾರಸ್ವಾಮಿ ಅವರು, ಎರಡು ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಇದೆ. ಹೀಗಾಗಿ ಬಿಜೆಪಿ ನಾಯಕರೇ ಕುಳಿತು ಸಮಸ್ಯೆಯನ್ನು ಬಗೆಹರಿಸಬಹುದು. ಆದರೆ ಇವರೇ ವಿಷಯ ಡೈವರ್ಟ್ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ನಾಯಕರಿಗೆ ಅಭಿವೃದ್ದಿ ವಿಷಯ ಇಲ್ಲ, ಹೀಗಾಗಿ ನೀನು ಅತ್ತಂತೆ ನಟಿಸು ನಾನು ಹೊಡೆದಂತೆ ನಟಿಸುತ್ತೇನೆ ಎಂಬಂತೆ ರಾಜ್ಯ ರಾಜ್ಯದ ಬಿಜೆಪಿ ನಾಯಕರು ಹೊಸ ನಾಟಕ ಶುರುಮಾಡಿದ್ದಾಋೆ. ಆದರೆ ಜನರೇನು ದಡ್ಡರೆ ಎಂದು ಹೇಳಿದರು.
ನಾವು ಈ ಬಾರಿ 123 ರಿಂದ 130 ಸೀಟ್ ಗೆಲ್ತೀವಿ ಎಂಬ ವಿಶ್ವಾಸವಿದೆ ಎಂದ ಎಚ್ಡಿಕೆ, ರಾಜ್ಯದ ಬೇರೆ ಯಾವ ಪಕ್ಷದ ನಾಯಕರು ನನ್ನ ಸಂಪರ್ಕದಲ್ಲಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.