KSRTC: ಡಿ.31ರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಸಮಾನ ಮನಸ್ಕರ ಒಕ್ಕೂಟ ವಿರೋಧ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆತ ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಡಿ.31ರಂದು ಕರೆ ನೀಡಿರುವ ‘ಜಂಟಿ ಕ್ರಿಯಾ ಸಮಿತಿ’ ಹೋರಾಟವನ್ನು ಕೆಎಸ್ಆರ್ಟಿಸಿ ನೌಕರರ ಸಮಾನ ಮನಸ್ಕರ ಒಕ್ಕೂಟ ವಿರೋಧಿಸಿದೆ.
ಮೈಸೂರು ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಇತ್ತೀಚೆಗೆ ಈ ಸಂಬಂಧ ಸಭೆ ನಡೆಸಿದ ನಂತರ ಕೂಟದ ಮೈಸೂರು ಜಿಲ್ಲಾಧ್ಯಕ್ಷ ವಿಶ್ವನಾಥ್ ಮಾಧ್ಯಮ ಗಳಿಗೆ ಮಾಹಿತಿ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಅಧಿಕಾರ ವಹಿಸಿಕೊಂಡ ದಿನದಿಂದ 4 ಕೆಎಸ್ಆರ್ಟಿಸಿ ನಿಗಮಗಳ ಸಿಬ್ಬಂದಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.
ಅಲ್ಲದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾದ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಹಾಗೂ ಕಳೆದ 35 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಾಲ್ಕೂ ನಿಗಮಗಳ ಸಾರಿಗೆ ಸಂಘಟನೆಗಳಿಗೆ ಚುನಾವಣೆ ನಡೆಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.
ಆದರೆ, ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ, ಸದಸ್ಯರು 4ವರ್ಷಕ್ಕೊಮ್ಮೆ ವೇತನ ಪರಿಷ್ಕರಿಸಿ ಎಂದು ಒತ್ತಾಯಿಸಿ ಸರ್ಕಾರ ಮತ್ತು ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ಸಾರಿಗೆ ನೌಕರರನ್ನು ಇಲ್ಲಿವರೆಗೂ ಎತ್ತಿಕಟ್ಟೆ ಅವರ ಬದುಕನ್ನು ಸರ್ವನಾಶ ಮಾಡಿದ್ದರು. ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಸಂಘರ್ಷ ಮಾಡುವ ಬದಲು ಸರ್ಕಾರದ ಮನವೊಲಿಸಿ, ಸರ್ಕಾರಿ ನೌಕರರಂತೆ ನಮಗೂ ಸರಿ ಸಮಾನ ವೇತನ ನೀಡುವುದಕ್ಕೆ ಒತ್ತಾಯಿಸಬೇಕು.
7ನೇ ವೇತನ ಆಯೋಗವನ್ನು ಸಾರಿಗೆ ನೌಕರರಿಗೂ ಅನುಷ್ಠಾನಗೊಳಿಸುವುದು ಹಾಗೂ ಸಾರಿಗೆ ಸಂಘಟನೆಗಳಿಗೆ ಚುನಾವಣೆ ಮೂಲಕ ಆಯ್ಕೆ ಮಾಡುವ ಪದ್ಧತಿಗೆ ಚಾಲನೆ ನೀಡುವ ಬೇಡಿಕೆಗಳಿಗೆ ಒಪ್ಪಿದರೆ, ಡಿ.31ರ ಜಂಟಿ ಕ್ರಿಯಾ ಸಮಿತಿ ಹೋರಾಟಕ್ಕೆ ನಮ್ಮ ಬೆಂಬಲಿ ನೀಡುತ್ತೇವೆ. ಇಲ್ಲವಾದರೆ, ನಮ್ಮ ಸಂಘಟನೆಯ ಬೆಂಬಲ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, ಸರ್ಕಾರದ ಅಂಗಸಂಸ್ಥೆಯಾಗಿರುತ 4 ಸಾರಿಗೆ ನಿಗಮಗಳ ನೌಕರರು, ಬೀಗಿಳಿದು ಪ್ರತಿಭಟನೆ ನಡೆಸುತ್ತಿರುವುದರಿಂದ ಸಾರಿಗೆಯನ್ನು ನಂಬಿರುವ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಹಾಗಾಗಿ ಡಿ.31ರಂದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ನೀಡಿರುವ ಹೋರಾಟಕ್ಕೆ ನಮ್ಮ ಒಕ್ಕೂಟದಿಂದ ಬೆಂಬಲ ಇಲ್ಲ ಎಂದರು.
ಈ ವೇಳೆ ನೌಕರರ ಕೂಟದ ಗೌರವಾದ ಬಿ.ಎಸ್.ಸುರೇಶ್, ತಾಳಶಾಸನ ಮೋಹನ ಸೇರಿದಂತೆ ಸಮಾನಮನಸ್ಕರ ಒಕ್ಕೂಟ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.