KSRTC ಹಾಸನ ಹೊಸ ಬಸ್ ನಿಲ್ದಾಣ: ಬಸ್‌ನಲ್ಲಿ ಮಲಗಿದ್ದ ಚಾಲನಾ ಸಿಬ್ಬಂದಿಗಳ ಮುಖಕ್ಕೆ ಸ್ಪ್ರೇ ಹೊಡೆದು ಕಳವಿಗೆ ಯತ್ನ
ಹಾಸನ: ಕರ್ನಾಕಟ ರಾಜ್ಯ ರಸ್ತೆ ಸಾರಿಗೆ ನಿಗಮದ ಹಾಸನ ಹೊಸ ಬಸ್ ನಿಲ್ದಾಣದಲ್ಲಿ ರಾತ್ರಿ ಪಾಳಿ ತಂಗಿದ್ದ ಬಸ್‌ಗಳಲ್ಲಿ ನಿರ್ವಾಹಕ ಹಣ ಕೊಳ್ಳೆ ಹೊಡೆಯಲು ಖದೀಮರು ಬಸ್‌ನಲ್ಲಿ ಮಲಗಿದ್ದ ಚಾಲನಾ ಸಿಬ್ಬಂದಿಗಳ ಮುಖಕ್ಕೆ ಸ್ಪ್ರೇ ಮಾಡಿ ಯತ್ನಿಸಿದ್ದಾರೆ.
ಈ ಚಾಲನಾ ಸಿಬ್ಬಂದಿಗಳು ನಿದ್ರೆಗೆ ಜಾರಿರುವುದನ್ನು ಖಚಿತ ಪಡಿಸಿಕೊಂಡ ಕಳ್ಳರು ಹಿಂಬದಿ ಟೈಯರ್ ನೇರದ ಕಿಟಕಿ ಗಾಜನ್ನು ಸರಿಸಿ ಬಸ್ ಒಳಗೆ ನುಸುಳಿದ್ದಾರೆ. ಬಳಿಕ ಬಸ್‌ನಲ್ಲಿ ಸಮವಸ್ತ್ರ ಬಿಚ್ಚಿ ಮಲಗಿದ್ದ ಚಾಲಕ ಮತ್ತು ನಿರ್ವಾಹಕರ ಬಟ್ಟೆಗಳನ್ನು ಹುಡುಕಿದ್ದಾರೆ. ಆದರೆ ಏನು ಸಿಕ್ಕಿಲ್ಲ. ಒಂದು ವೇಳೆ ನಿರ್ವಾಹಕರ ಹಣದ ಬ್ಯಾಗ್ ಸಿಕ್ಕಿದ್ದರೆ ಇಂದು ಅವರು ಕೈಯಿಂದ ಹಣವನ್ನು ಸಂಸ್ಥೆಗೆ ಕಟ್ಟಬೇಕಾದ ಪರಿಸ್ಥಿತಿ ಬರುತ್ತಿತ್ತು.
ನಿಲ್ದಾಣದಲ್ಲಿ ರಾತ್ರಿಪಾಳಿಯಲ್ಲಿ ನಿಂತಿದ್ದ 8ಕ್ಕೂ ಹೆಚ್ಚು ಬಸ್‌ಗಳಲ್ಲಿ ನಿರ್ವಾಹಕರ ಹಣದ ಬ್ಯಾಗ್ ಕಳವು ಮಾಡಲು ಕಿಟಕಿ ಮೂಲಕ ಬಸ್‌ನ ಒಳಹೋಗಿ ಬಸ್‌ನಲ್ಲಿ ಮಲಗಿದ್ದ ಚಾಲನಾ ಸಿಬ್ಬಂದಿಗಳ ಮುಖಕ್ಕೆ ಸ್ಪ್ರೇ ಮಾಡಿದ್ದಾರೆ. ಆದರೆ ಈ ಬಸ್‌ಗಳ ನಿರ್ವಾಹಕರ ಎಚ್ಚರಿಕೆ ಯಾವುದೇ ಕಳವಿಗೆ ವಕಾಶ ಸಿಕ್ಕಿಲ್ಲ.
ಹೀಗಾಗಿ ಇನ್ನು ಮುಂದೆ ಪ್ರತಿಯೊಬ್ಬ ನಿರ್ವಾಹಕರು ಎಚ್ಚರಿಕೆ ವಹಿಸಬೇಕಿದ್ದು, ನಿಮ್ಮ ಹಣದ ಬ್ಯಾಗ್‌ಅನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಒಂದು ವೇಳೆ ಮೈ ಮರೆತು ಸೈಡ್‌ನಲ್ಲಿ ಇಟ್ಟುಕೊಂಡು ಮಲಗಿದರೆ ನೀವು ಕೆಟ್ಟಂತೆಯೇ ಸರಿ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚರ ವಹಿಸಬೇಕಿದೆ.
ಇನ್ನು ಬಸ್‌ನ ಕಿಟಕಿ ಗಾಜುಗಳನ್ನು ಸರಿಸಿ ಒಳನುಗುತ್ತಿರುವ ಈ ಖದೀಮರ ಹೆಡೆಮುರಿಕಟ್ಟುವುದಕ್ಕೆ ಪೊಲೀಸರು ರಾತ್ರಿವೇಳೆ ನಿಲ್ದಾಣದಲ್ಲಿ ಅರ್ಧಗಂಟೆಗೊಮ್ಮಯಾದರೂ ಗಸ್ತು ತಿರಬೇಕು ಎಂದು ನಿಲ್ದಾಣಾಧಿಕಾರಿಗಳು ಹಾಗೂ ಚಾಲನಾ ಸಿಬ್ಬಂದಿ ಮನವಿ ಮಾಡಿದ್ದಾರೆ. ಅಲ್ಲದೆ ಸಂಬಂಧಪಟ್ಟ ನಮ್ಮ ಸಂಸ್ಥೆಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ಮುಂದಾಗುವ ಅನಾಹುತವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.