ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರಿಗೆ ಇಲಾಖೆಯ ಸಮಗ್ರ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಒಳಗೊಂಡ ಒನ್‌ಮ್ಯಾನ್ ಸಮಿತಿ ರಚಿಸಿತ್ತು. ಈ ಸಮಿತಿಯ ಅವಧಿಯನ್ನು ಈಗ ಮತ್ತೆ ಮಾರ್ಚ್ 2023ರವರೆಗೆ ವಿಸ್ತರಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಪುನರ್ರಚನೆ, ಆಸ್ತಿ ಹಣಗಳಿಕೆ (Restructuring, Asset Monetization) ಆರ್ಥಿಕ ಸ್ವಾಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ಸಂಪೂರ್ಣ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು 30-11-2021ರಲ್ಲಿ ಶ್ರೀನಿವಾಸಮೂರ್ತಿ ಅವರ ನೇತೃತ್ವದ ಸಮಿತಿ ರಚನೆಯಾಗಿತ್ತು ಎಂದಿದ್ದಾರೆ.
30-11-2021ರಲ್ಲಿ ರಚಿಸಿದ್ದಂತ ಎಂ.ಆರ್. ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿನ ಒನ್ ಮ್ಯಾನ್ ಕಮಿಟಿಯ ಅವಧಿಯನ್ನು ಮಾರ್ಚ್ 2023ರವರೆಗೆ ವಿಸ್ತರಿಸಿ ಆದೇಶಿಸಿರೋದಾಗಿ ಹೇಳಿದ್ದಾರೆ. ಅಂದಹಾಗೇ ಈ ಸಮಿತಿಯನ್ನು ಮೂರು ತಿಂಗಳ ಅವಧಿಗೆ ಮಾತ್ರವೇ ರಚಿಸಲಾಗಿತ್ತು.
28-02-2022ಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್ ಶ್ರೀನಿವಾಸಮೂರ್ತಿ ಅಧ್ಯಕ್ಷತೆಯ ಸಮಿತಿಯ ಅವಧಿ ಮುಕ್ತಾಯಗೊಂಡಿತ್ತು. ಹೀಗಾಗಿ ಈ ಸಮಿತಿಯನ್ನು ಮತ್ತೆ ಮಾರ್ಚ್ 2023ರವರೆಗೆ ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ಸಂಪನ್ಮೂಲ ಸೇರಿದಂತೆ ವಿವಿಧ ವಿಷಯಗಳ ಮೇಲೆ ಅಧ್ಯಯನ ನಡೆಸಿ, ವರದಿ ನೀಡಲು ಕಾಲಾವಧಿ ವಿಸ್ತರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಆದರೆ ಕಳೆದ ಜುಲೈ 2022ರ ಮೂರನೇ ವಾರದಲ್ಲೇ ಈ ಒನ್‌ಮ್ಯಾನ್ ಕಮಿಟಿ ಸರ್ಕಾರಕ್ಕೆ ವರದಿ ಸಲ್ಲಿಸಿ ಆಗಿದೆ. ಅದರಲ್ಲಿ ಈ ಕೆಳಕಂಡ ಅಂಶಗಳನ್ನು ಶ್ರೀನಿವಾಸ ಮೂರ್ತಿ ಅವರು ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.
ಕೊರೊನಾ ದೇಶದ ಜನರನ್ನು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಹೋಗುವಂತೆ ಮಾಡಿದೆ. ಹಾಗೆಯೇ ಸರ್ಕಾರಿ ಸಂಸ್ಥೆಗಳಿಗೂ ಇದು ಭಾರಿ ಹೊಡೆತ ನೀಡಿದ್ದು, ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಇನ್ನಷ್ಟು ಸಿಲುಕುವಂತೆ ಮಾಡಿದೆ. ಹೌದು! ಕೆಎಸ್ಆರ್ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯುವ್ಯ ಸಾರಿಗೆ ಸಂಕಷ್ಟದಲ್ಲಿ ಸಿಲುಕಿದ್ದು, ನಷ್ಟ ಅನುಭವಿಸುತ್ತಿವೆ.
ಕೊರೊನಾ ಬಂದಾಗಿಂದ ಸಾರಿಗೆ ನಿಗಮಗಳಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಬಸ್‌ಗಳ ನಿರ್ವಹಣೆ, ಡಿಪೋಗಳ ಖರ್ಚು ವೆಚ್ಚ , ನೌಕರರ ವೇತನಕ್ಕೂ ಹಣವಿಲ್ಲದೇ ನಿಗಮಗಳು ಪರದಾಡುತ್ತಿದ್ದು, 4500 ಕೋಟಿ ರೂ. ನಷ್ಟವಾಗಿದೆ. 1997 ರಿಂದ ಇಲ್ಲಿಯವರೆಗೂ ಪಿಎಫ್, ಎಲ್ ಐಸಿ, ನಿವೃತ್ತಿ ವೇತನ ಸೇರಿ 1,700 ಕೋಟಿ ರೂ.ಗಳನ್ನು ನೌಕರರಿಗೆ ಕೊಡಲಾಗದೆ ಬಾಕಿ ಉಳಿಸಿಕೊಂಡಿವೆ.
ಹೀಗಾಗಿ ನಾಲ್ಕು ನಿಗಮಗಳನ್ನೂ ವಿಲೀನಗೊಳಿಸಿ, ಆಡಳಿತ ವಿಭಾಗದ ನಷ್ಟ ಸೇರಿದಂತೆ ಹಲವು ನಷ್ಟಗಳನ್ನು ತಪ್ಪಿಸುವಂತೆ ಕಮಿಟಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಮರ್ಜ್ ಮಾಡುವಂತೆ ಐಎಎಸ್ ನಿವೃತ್ತ ಅಧಿಕಾರಿ ಎಂ.ಆರ್.ಶ್ರೀನಿವಾಸ್ ಮೂರ್ತಿ ನೇತೃತ್ವದ ಒನ್ ಮ್ಯಾನ್ ಕಮಿಟಿಗೆ ಸಲಹೆ ನೀಡಿದ್ದು, ಈ ನಿಗಮಗಳ ಭವಿಷ್ಯ ಇನ್ನೂ ನಿರ್ಧಾರವಾಗಬೇಕಿದೆ.
1961 ರಲ್ಲಿ ಆರಂಭವಾಗಿದ್ದ ಕೆಎಸ್ಆರ್ಟಿಸಿ 1997 ರಲ್ಲಿ ನಾಲ್ಕುನಿಗಮಗಳಾಗಿ ವಿಂಗಡಣೆಯಾಗಿತ್ತು, ಆದರೆ 1997 ರಲ್ಲೂ ಪ್ರತ್ಯೇಕ ನಿಗಮ ಬೇಡ ಎಂದು ಫೆಡರೇಶನ್ ಸಲಹೆ ನೀಡಿತ್ತು, ಆದರೆ ವಿಂಗಡನೆ ಮಾಡಲಾಗಿತ್ತು. ಸದ್ಯ ಆರ್ಥಿಕ ಪರಿಸ್ಥಿತಿಯಿಂದ ದಿವಾಳಿಯಾಗಿರುವ ಸಾರಿಗೆ ನಿಗಮಗಳನ್ನು ವಿಲೀನಗೊಳಿಸಿ ನೌಕರರ ಹಾಗೂ ಸಾರಿಗೆ ನಿಗಮಗಳ ಅಭಿವೃದ್ಧಿ ಪಡಿಸಬೇಕು.
2020-21ರ ಆದಾಯ, ನಷ್ಟ : 2020-21ರಲ್ಲಿ ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದ್ದು, ಹೆಚ್ಚು ನಷ್ಟವನ್ನು ಅನುಭವಿಸಿವೆ. ಈ ಬಾರಿ ಬರೋಬ್ಬರಿ 1221.58 ಕೋಟಿ ರೂ. ನಷ್ಟವಾಗಿದ್ದು, ನಾಲ್ಕು ನಿಗಮಗಳಿಗೆ ಬಂದ ಆದಾಯ ಕೇವಲ 6254.40 ಕೋಟಿ ಎಂದು ಇಲಾಖೆ ಮಾಹಿತಿ ನೀಡಿದೆ. 2020-21ರಲ್ಲಿ ಇಂಧನ ವೆಚ್ಚ 2001.51 ಕೋಟಿ ರೂ. ಹಾಗೂ ಸಿಬ್ಬಂದಿ ವೆಚ್ಚ ಸುಮಾರು 4042 ಕೋಟಿ ರೂ ಆಗಿದ್ದು, ಹೆಚ್ಚು ನಷ್ಟ ಅನುಭವಿಸುತ್ತಿರುವ ನಿಗಮಗಳನ್ನು ಒಟ್ಟುಗೂಡಿಸುವುದು ಅನಿವಾರ್ಯವಾಗಿದೆ.
ಕೆಎಸ್ಆರ್ಟಿಸಿಯ ಆದಾಯ ವೆಚ್ಚ ನಷ್ಟ: ಒಟ್ಟು ವೆಚ್ಚ- 2667.59 ಕೋಟಿ ರೂ., ಒಟ್ಟು ಆದಾಯ- 2239 ಕೋಟಿ ರೂ., ನಷ್ಟ- 428.59 ಕೋಟಿ ರೂ., ಇಂಧನ ವೆಚ್ಚ- 774.39 ಕೋಟಿ ರೂ. ಸಿಬ್ಬಂದಿ ವೇತನಕ್ಕೆ- 1359.61ಕೋಟಿ ರೂಪಾಯಿಗಳು.
ಬಿಎಂಟಿಸಿ ಆದಾಯ ವೆಚ್ಚ ನಷ್ಟ: ಒಟ್ಟು ವೆಚ್ಚ- 1766.36 ಕೋಟಿ ರೂ., ಒಟ್ಟು ಆದಾಯ- 1463.15 ಕೋಟಿ ರೂ., ನಷ್ಟ- 303.21ಕೋಟಿ ರೂ., ಇಂಧನ ವೆಚ್ಚ- 361.67 ಕೋಟಿ ರೂ. ಸಿಬ್ಬಂದಿ ವೇತನಕ್ಕೆ- 1059.06 ಕೋಟಿ ರೂಪಾಯಿಗಳು.
ಎನ್ಡಬ್ಲ್ಯುಆರ್ಟಿಸಿ ಆದಾಯ ವೆಚ್ಚ ನಷ್ಟ : ಒಟ್ಟು ವೆಚ್ಚ- 1597.60ಕೋಟಿ ರೂ., ಒಟ್ಟು ಆದಾಯ- 1293.08ಕೋಟಿ ರೂ., ನಷ್ಟ- 304.52 ಕೋಟಿ ರೂ., ಇಂಧನ ವೆಚ್ಚ- 453.26 ಕೋಟಿ ರೂ. ಸಿಬ್ಬಂದಿ ವೇತನಕ್ಕೆ- 862.30 ಕೋಟಿ ರೂಪಾಯಿಗಳು.
ಕೆಕೆಆರ್‌ಟಿಸಿ ಆದಾಯ ವೆಚ್ಚ ನಷ್ಟ : ಒಟ್ಟು ವೆಚ್ಚ- 1444.43 ಕೋಟಿ ರೂ., ಒಟ್ಟು ಆದಾಯ- 1259.17 ಕೋಟಿ ರೂ., ನಷ್ಟ- 185.26 ಕೋಟಿ ರೂ., ಇಂಧನ ವೆಚ್ಚ- 412.19 ಕೋಟಿ ರೂ. ಸಿಬ್ಬಂದಿ ವೆತನಕ್ಕೆ- 761.84 ಕೋಟಿ ರೂಪಾಯಿಗಳು.
ಇವುಗಳನ್ನು ಒಳಗೊಂಡಂತೆ ನೌಕರರ ಕರ್ತವ್ಯ ಹೇಗಿರಬೇಕು, ಅವರ ವೇತನ ಹೇಗಿರಬೇಕು ಎಂಬುವುದು ಸೇರಿದಂತೆ ಹಲವಾರು ರೀತಿಯಲ್ಲಿ ವಿಸ್ತೃತ ವರದಿ ಮಾಡಿ ಸಲ್ಲಿಸಲಾಗಿದೆ. ಆದರೆ, ಅವುಗಳಲ್ಲಿ ಕೆಲ ಸಾಧಕ ಬಾಧಕಗಳು ಇದ್ದು ಅವುಗಳನ್ನು ತುಲನೆ ಮಾಡಿ ಸರ್ಕಾರ ಒಂದು ನಿರ್ಧಾರಕ್ಕೆ ಬರಬಹುದಾಗಿತ್ತು. ಆದರೆ ಅದಾವುದನ್ನು ಮಾಡದೆ ಮತ್ತೆ 2023ರ ಮಾರ್ಚ್‌ವರೆಗೆ ಸಮಿತಿ ವಿಸ್ತರಿಸಿರುವುದು ನೌಕರರ ಕಣ್ಣಿಗೆ ಮಣ್ಣೆರೆಚುವ ಕೆಲಸವಲ್ಲದೇ ಮತ್ತೇನು ಎಂದು ನೌಕರರು ಕಿಡಿಕಾರುತ್ತಿದ್ದಾರೆ.