
ಮೈಸೂರು: ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಬಸ್ ಚಾಲಕನಿಗೆ ಹಠಾತ್ ಎದೆ ನೋವು ಕಾಣಿಸಿಕೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡ ಬಸ್ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಘಟನೆ ಎಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಗ್ರಾಮದ ಬಳಿ ನಡೆದಿದೆ.
ಇಂದು ಈ ಘಟನೆ ನಡೆದಿದ್ದು, ಡಿಕ್ಕಿಯಿಂದ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಹೃದಯಾಘಾತದಿಂದ ಚಾಲಕ ಸ್ಟೇರಿಂಗ್ ಮೇಲೆಯೇ ಕೊನೆಯುಸಿರೆಳೆದಿದ್ದಾರೆ.
ಪಾದಚಾರಿ ಮಹಿಳೆ ಲಕ್ಷ್ಮಮ್ಮ ಹಾಗೂ ಬಸ್ ಚಾಲಕ ಸುನೀಲ್ ಕುಮಾರ್ ಮೃತಪಟ್ಟರು. ಬಸ್ ಚಾಲಕ ಸ್ಟೇರಿಂಗ್ ಮೇಲೆ ಬಿದ್ದಿದ್ದನ್ನು ಕಂಡ ಗಾಬರಿಗೊಂಡ ಪ್ರಯಾಣಿಕರು ಆತನ ಎಬ್ಬಿಸುಲು ಪ್ರಯತ್ನಪಟ್ಟಿದ್ದಾರೆ. ಆದರೆ ಅಷ್ಟರಲ್ಲಾಗಲೇ ಹೃದಯಾಘಾತದಿಂದ ನಿಧನರಾಗಿದ್ದರು.
ಏಕಾಏಕಿ ಬಸ್ ಚಾಲನೆ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದ್ದರಿಂದ ಚಾಲಕ ಸುನೀಲ್ ಕುಮಾರ್ ಸ್ಟೇರಿಂಗ್ ಮೇಲೆ ಬಿದ್ದಿದ್ದಾರೆ. ಇನ್ನು ಬಸ್ ಕೇರಳದ ಮಾನಂದವಾಡಿಯಿಂದ ಎಚ್. ಡಿ.ಕೋಟೆಗೆ ಬರುತ್ತಿದ್ದಾಗ ತಾಲೂಕಿನ ದಮ್ಮನಕಟ್ಟೆ ಬಳಿ ಅವಘಡ ಸಂಭವಿಸಿದೆ.
ಇತ್ತ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಪಕ್ಕ ತೆರಳುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಗದ್ದೆಯಲ್ಲಿ ನಿಂತಿದೆ. ತೀವ್ರ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಚಾಲಕ ಸ್ಟೇರಿಂಗ್ ಮೇಲೆ ಅಸುನೀಗಿದ್ದಾರೆ. ಪ್ರಯಾಣಿಕರು ಎಬ್ಬಿಸಲು ಬಂದಾಗ ಆತನೂ ಮೃತಪಟ್ಟಿರುವುದು ಗೊತ್ತಾಗಿದೆ.
ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಂತರಸಂತೆ ಪೊಲೀಸರು, ಇಬ್ಬರ ಮೃತದೇಹಗಳನ್ನು ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಸ್ಥಳಕ್ಕೆ ಕೋಟೆ ಬಸ್ ಡಿಪೋ ಅಧಿಕಾರಿಗಳು ಆಗಮಿಸಿ, ಪ್ರಯಾಣಿಕರಿಗೆ ಬದಲಿ ಬಸ್ ವ್ಯವಸ್ಥೆ ಮಾಡಿಕೊಟ್ಟರು.
ಮೃತ ಚಾಲಕ ಸುನೀಲ್ ಕುಮಾರ್ ಮೈಸೂರು ಮೂಲದವರಾಗಿದ್ದು, ಹಲವು ವರ್ಷಗಳಿಂದ ಹೊರ ಗುತ್ತಿಗೆ ಆಧಾರದ ಮೇರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಇನ್ನು ಘಟನೆ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ರಾಜ್ಯದಲ್ಲಿ ಆಗಾಗ ವರದಿಯಾಗುತ್ತಲೇ ಇದ್ದು, ಇದು ಪ್ರಯಾಣಿಕರನ್ನು ಆತಂಕಕ್ಕೆ ದೂಡಿದೆ.