NEWSಬೆಂಗಳೂರುಸಂಸ್ಕೃತಿ

ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ “ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ” ಪುರಸ್ಕೃತರಾದ ಬಾನು ಮುಷ್ತಾಕ್ ಹಾಗೂ ಶ್ರೀಮತಿ ದೀಪಾ ಭಸ್ತಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಎದೆಯ ಹಣತೆ ಕೃತಿಗಾಗಿ ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿಗೆ ಭಾಜನರಾದ ಸಾಹಿತಿ ಬಾನು ಮುಷ್ತಾಕ್ ಹಾಗೂ ಕೃತಿಯ ಅನುವಾದಕಿ ದೀಪಾ ಭಸ್ತಿ ಅವರು ನಮ್ಮ ಭಾಷೆಗೆ ಬೂಕರ್ ಒದಗಿಸಿಕೊಡುವ ಮೂಲಕ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ. ಇದು ಇಡೀ ಕನ್ನಡ ನಾಡು ಹೆಮ್ಮೆ‌ಪಡುವ ಕ್ಷಣ ಎಂದರು.

ತಮ್ಮ ಕತೆಗಳ ಮೂಲಕ ಮತ್ತು ಅನುವಾದದ ಮೂಲಕ ಕನ್ನಡಕ್ಕೆ ಕೀರ್ತಿ ತಂದ ಬಾನು ಮುಷ್ತಾಕ್, ದೀಪಾ ಭಸ್ತಿ ಅವರಿಗೆ ಸರ್ಕಾರದಿಂದ ತಲಾ ₹10 ಲಕ್ಷ ಪುರಸ್ಕಾರ ನೀಡಲಾಗುವುದು. ಇದರ ಜತೆಗೆ ಬಾನು ಅವರ ಕತೆಗಳನ್ನು ಇಂಗ್ಲಿಷ್‌ಗೆ ಪ್ರಕಟಿಸಲು, ಅನುವಾದಕ್ಕೂ ಸರ್ಕಾರದ ನೆರವು ನೀಡಲಾಗುವುದು ಎಂದು ತಿಳಿಸಿದರು.

ಪತ್ರಕರ್ತೆಯಾಗಿ, ಲೇಖಕಿಯಾಗಿ, ವಕೀಲರಾಗಿ, ಹೋರಾಟಗಾರ್ತಿಯಾಗಿ ಸಮಾಜದಲ್ಲಿ ತೊಡಗಿಸಿಕೊಂಡಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಯ ಶಕ್ತಿ ಎಂದ ಅವರು, ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಬರೆಯುತ್ತಲೇ, ವಕೀಲೆಯಾಗಿ ಬಡವರ ಪರ ವಕಾಲತ್ತು ವಹಿಸುತ್ತಾ, ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಗಳಲ್ಲಿ ಸಮಾಜಮುಖಿ ಸತ್ವ ಇದೆ ಎನ್ನುವುದಕ್ಕೆ ಸಾಕ್ಷಿ ಎಂದರು.

ಇನ್ನು ಮುಸ್ಲಿಂ ಸಮುದಾಯದ ಹೆಣ್ಣು‌ಮಕ್ಕಳ ಧ್ವನಿಯಾಗಿ ಮೌಢ್ಯ ವಿರೋಧಿಸಿ ಬರೆಯುವ ಪ್ರಗತಿಪರ ಎದೆಗಾರಿಕೆ ಬಾನು ಅವರಲ್ಲಿದೆ. ಸಾಹಿತ್ಯದ ಮೂಲಕ ಮಾನವೀಯ ಸಂದೇಶ ನೀಡುವ ಜವಾಬ್ದಾರಿ ಬಾನು ಮುಷ್ತಾಕ್ ಅವರು ನಿರ್ವಹಿಸಿದ್ದಾರೆ ಎಂದು ಹೇಳಿದರು.

ಕವಿರಾಜಮಾರ್ಗದಲ್ಲಿ ಪರಧರ್ಮ ಮತ್ತು ಪರ ವಿಚಾರಗಳನ್ನು ಸಹಾನುಭೂತಿಯಿಂದ ನೋಡಬೇಕು ಎಂದು ಕರೆ ನೀಡಿದ್ದರೆ, ಆದಿಕವಿ ಪಂಪ ಅವರು ಮನುಷ್ಯ ಜಾತಿ ತಾನೊಂದೇ ವಲಂ ಎಂದಿದ್ದಾರೆ, ಬಸವಣ್ಣನವರು “ಇವ ನಮ್ಮವ” ಎಂದು ಹೇಳಿದ್ದಾರೆ. ಹೆಣ್ಣಿನ ಧ್ವನಿಯಾದ ಅಕ್ಕಮಹಾದೇವಿ ಅವರೂ ಇದನ್ನೇ ಧ್ವನಿಸಿದ್ದಾರೆ. ಇವರೆಲ್ಲರ ಆಶಯಗಳ ಮುಂದುವರಿಕೆಯಾಗಿ ಬಾನು ಮುಷ್ತಾಕ್ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಇನ್ನು ಇಂಥದ್ದೊಂದು ಮೇರು ಪ್ರಶಸ್ತಿಗೆ ಭಾಜನರಾದ ಬಾನು ಅವರನ್ನು ಸನ್ಮಾನಿಸುವುದು ಕನ್ನಡಿಗನಾಗಿ ನನಗೆ ಸಂತೋಷದ ವಿಷಯ. ಇಂತಹ ಇನ್ನಷ್ಟು ಬರಹಗಳು ಅವರಿಂದ ಹೊರಬರಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!