ಬೆಂಗಳೂರು: ಬಿಜೆಪಿ ಶಾಸಕ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿ 6 ಮಂದಿ ಉದ್ಯಮಿಗಳ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ನೆಟ್ಟಗೆರೆ ಬಳಿ ನಿನ್ನೆ (ಜ.1) ನಡೆದಿತ್ತು.
ಮೂಲತಃ ಮೈಸೂರಿನ ಹಾಳಿ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಬಳಿಯ ಅಮಲೀಪುರದ ನಿವಾಸಿ ಪ್ರದೀಪ್ (47) ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಇವರು ಸಾವಿಗೂ ಮುನ್ನ ಅರವಿಂದ ಲಿಂಬಾವಳಿ ಹೆಸರು, ಉದ್ಯಮಿಗಳ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಈ ಆಧಾರದ ಮೇಲೆ ಮೃತ ಪ್ರದೀಪ್ ಅವರ ಪತ್ನಿ ನೀಡಿದರ ದೂರಿನ ಮೇರೆಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.
ಘಟನೆ ವಿವರ: ಹೊಸ ವರ್ಷಾಚರಣೆ ಸಲುವಾಗಿ ಕುಟುಂಬ ಸಮೇತ ರಾಮನಗರದ ಕಗ್ಗಲೀಪುರ ಸಮೀಪವಿರುವ ನೆಟ್ಟಗೆರೆ ಬಳಿ ಇರುವ ರೆಸಾರ್ಟ್‌ಗೆ ಕುಟುಂಬ ಸಮೇತ ಬಂದಿದ್ದ ಪ್ರದೀಪ್ ರಾತ್ರಿ ಪಾರ್ಟಿ ಮಾಡಿ, ಬೆಳಗ್ಗೆ ಶಿರಾಗೆ ಹೋಗಬೇಕು ಎಂದು ಹೇಳಿ ರೆಸಾರ್ಟ್‌ನಿಂದ ಭಾನುವಾರ ಬೆಳಗ್ಗೆ ಒಬ್ಬರೆ ಬೆಂಗಳೂರಿನ ತಮ್ಮ ನಿವಾಸಕ್ಕೆ ಹೋಗಿ ಡೆತ್ ನೋಟ್ ಬರೆದಿದ್ದಾರೆ. ಬಳಿಕ ರೆಸಾರ್ಟ್‌ಗೆ ವಾಪಸ್ ಬರುವಾಗ ಕಾರಿನಲ್ಲೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಡೆತ್ ನೋಟ್‌ನಲ್ಲಿ ಕಾರಣ ಉಲ್ಲೇಖಿಸಿರುವ ಪ್ರದೀಪ್, ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಬಳಿ ರೆಸಾರ್ಟ್ ತೆರೆಯಲು 5 ಮಂದಿ ನನ್ನ ಬಳಿ ಮಾತನಾಡಿ, ಒಂದೂವರೆ ಕೋಟಿ ಹಣ ಪಡೆದುಕೊಂಡಿದ್ದರು. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಮನೆ ಮಾರಿದ್ದೆ. ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಆದರೆ, ಪಾಲುದಾರಿಕೆ ಹೆಸರಿನಲ್ಲಿ ನನಗೆ ಮೋಸ ಮಾಡಿದ್ದಾರೆ. ಒಟ್ಟು ಎರಡೂವರೆ ಕೋಟಿ ಹಣ ನನಗೆ ಬರಬೇಕು. ಈ ನಡುವೆ ಅರವಿಂದ ಲಿಂಬಾವಳಿ ರಾಜಿ ಮಾಡುವ ಪ್ರಯತ್ನ ಮಾಡಿದ್ದರು. ಆದರೂ ನನಗೆ ಪೂರ್ಣ ಹಣ ನೀಡದೇ ಮೋಸ ಮಾಡಲಾಗಿದೆ.
ಈ ಬಗ್ಗೆ ಕೇಳಿದರೆ ಅರವಿಂದ ಲಿಂಬಾವಳಿ ಸಹ ನನಗೆ ಸಹಾಯ ಮಾಡಿಲ್ಲ. ಹಾಗಾಗಿ ನನ್ನ ಸಾವಿಗೆ ಈ 6 ಮಂದಿ ಕಾರಣ, ಎಲ್ಲರಿಗೂ ಶಿಕ್ಷೆ ಆಗಬೇಕು ಎಂದು ಪ್ರದೀಪ್ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಮನಗರ ಎಸ್ಪಿ ಸಂತೋಷ್ ಬಾಬು ಕೂಡಾ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನಿನ್ನೆ ಪ್ರಕರಣ ದಾಖಲಾಗಿತ್ತು.
ಇಂದು ಉದ್ಯಮಿ ಪ್ರದೀಪ್ ಪತ್ನಿ ನೀಡಿದ ದೂರಿನನ್ವಯ ಪೊಲೀಸರು 6ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇನ್ನು ಡೆತ್‌ನೋಟ್‌ನಲ್ಲಿ ಅರವಿಂದ ಲಿಂಬಾವಳಿ, ಜಿ.ರಮೇಶ್ ರೆಡ್ಡಿ, ಕೆ.ಗೋಪಿ, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಹೆಸರು ಉಲ್ಲೇಖವಾಗಿದ್ದು, ಎಲ್ಲರೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆತ್ಮಹತ್ಯೆಗೆ ಶರಣಾದ ಪ್ರದೀಪ್ ಕೊನೆ ಬಾರಿಗೆ ಕರೆ ಮಾಡಿದ್ದು ಯಾರಿಗೆ..? ಪ್ರದೀಪ್ ಜತೆಗೆ ಯಾರಾರಿಗೆ ಸಂಬಂಧ ಇದೆ. ಮೃತ ಪ್ರದೀಪ್ ಯಾರೊಂದಿಗೆ ವ್ಯವಹಾರ ಮಾಡಿದ್ದರು. ಆತನ ವಾಟ್ಸಪ್ನಲ್ಲಿ ಡೀಟೈಲ್ಸ್ ಏನಿದೆ..? ಆತ್ಮಹತ್ಯೆ ಮಾಡಿಕೊಳ್ಳುವಾಗ ಬಳಸಿದ ಗನ್ ಯಾರದ್ದು..? ಅದರ ಲೈಸನ್ಸ್ ನಂಬರ್ ಏನು..? ಗನ್ ಮೇಲಿರೋ ಬೆರಳಚ್ಚು ಯಾರದ್ದು..? ಹೀಗೆ ಹತ್ತಾರು ವಿಚಾರಗಳ ಕುರಿತಾದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.