ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಹಲವು ರಾಜಕೀಯ ನಾಯಕರು, ಸಾಮಾಜಿಕ ಹೋರಾಟಗಾರರು ಹಾಗೂ ಗಣ್ಯ ವ್ಯಕ್ತಿಗಳು ಗುರುವಾರ ಆಮ್ ಆದ್ಮಿ ಪಾರ್ಟಿಗೆ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ , ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಹಾಗೂ ಪಕ್ಷದ ಉಪಾಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹಾಗೂ ಖ್ಯಾತ ಕಲಾವಿದ ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ಸಮ್ಮುಖದಲ್ಲಿ ಸೇರ್ಪಡೆಯಾದರು.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ರಾಜ್ಯದ ಜನತೆಯು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಅಧಿಕಾರ ಕೊಟ್ಟು, ಉತ್ತರ ಕರ್ನಾಟಕದ ಅಭಿವೃದ್ಧಿಯು ಅವುಗಳಿಂದ ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದಾರೆ. ಅಲ್ಲಿನ ನೀರಾವರಿ ಯೋಜನೆಗಳು ಹಲವು ದಶಕಗಳಿಂದ ನನೆಗುದಿಗೆ ಬಿದ್ದಿವೆ.
ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬಿಡುಗಡೆಯಾದ ಸಾವಿರಾರು ಕೋಟಿ ರೂಪಾಯಿ ಹಣವು ಭ್ರಷ್ಟ ರಾಜಕಾರಣಿಗಳ ಜೇಬು ಸೇರಿವೆ. ಪಾರದರ್ಶಕ ಆಡಳಿತ ನೀಡುವ ಆಮ್ ಆದ್ಮಿ ಪಾರ್ಟಿಯಿಂದ ಮಾತ್ರ ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತಿರುವ ಅಲ್ಲಿನ ನಾಯಕರು ಹಾಗೂ ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ ಎಎಪಿ ಸೇರುತ್ತಿದ್ದಾರೆ ಎಂದು ಹೇಳಿದರು.
ಕುರುಬ ಸಮುದಾಯದ ನಾಯಕರು ಹಾಗೂ ಕಾಂಗ್ರೆಸ್ ಮುಖಂಡರಾದ ಶಿವರಾಯಪ್ಪ ದೊಡ್ಡರಿಯಪ್ಪ ಜೋಗಿನ್, ರೈತ ನಾಯಕ ಹಾಗೂ ಬಿಜೆಪಿಯ ಬಾಗಕೋಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ಕೋಮರ್, ನಾಗರತ್ನ ಶಿಕ್ಷಣ ಮತ್ತು ಕಲ್ಯಾಣ ಸೇವೆಗಳ ಸಂಸ್ಥೆಯ ಮುಖ್ಯಸ್ಥ ಅನಿಲ್ ಕುಮಾರ್ ಬೇಗಾರ್, ಯುವ ಜನತಾದಳದ ಮಾಜಿ ಧಾರವಾಡ ಜಿಲ್ಲಾಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಸಂಜೀವ್ ಕುಮಾರ್ ಕುಲಕರ್ಣಿ, ʻಕಲ್ಬುರ್ಗಿ ಕಲರವʼ ಮತ್ತು ʻಬೆನಕ ಟೈಮ್ಸ್ʼ ಮಾಸಿಕ ಪತ್ರಿಕೆ ಪ್ರಧಾನ ಸಂಪಾದಕ ಸಾ.ಸಿ. ಬೆನಕನಳ್ಳಿ, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಗೀತಾ ಮಹಾಂತೇಶ್ ಯಾದಗಿ, ಅಧ್ಯಾಪಕರ ಸಂಘದ ಒಕ್ಕೂಟಗಳ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಗೌಡ, ಮುಂಡರಿಗಿ ಪರಸಭಾ ಸದಸ್ಯರು ಹಾಗೂ ಮುಂಡರಿಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ರಾಮನಹಳ್ಳಿ, ವಕೀಲರು ಹಾಗೂ ಕುಷ್ಟಗಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹುಲಗಪ್ಪ ಚುರಿ, ಪತ್ರಕರ್ತರು ಹಾಗೂ ಕರ್ನಾಟಕ ರಾಜ್ಯ ಹಾಲುಮತ ಮಹಾಸಭಾ ಸಂಘದ ಯುವ ಘಟಕದ ಅಧ್ಯಕ್ಷರಾದ ಸೋಮಣ್ಣ ಮಲ್ಲೂರು, ಸೊರಬ ತಾಲೂಕು ಸಮಾಜ ಸೇವಕರಾದ ಕೆ.ವೈ.ಚಂದ್ರಶೇಖರ, ಬಾಗಲಕೋಟೆ ಜಿಲ್ಲಾ ರೈತ ಮುಖಂಡ ಕೊಳ್ಳಿ, ಬಿಜಾಪುರ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಲೋನಿ ಸೇರಿದಂದತೆ ಅನೇಕರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು
ಅನೇಕ ಮುಖಂಡರು, ಬಾದಾಮಿ ಕ್ಷೇತ್ರದ ಸಿದ್ದರಾಮಯ್ಯನವರ ಬೆಂಬಲಿಗರು ಹಾಗೂ ಬಿಜೆಪಿಯ ಅನೇಕ ನಾಯಕರುಗಳ ಬೆಂಬಲಿಗರು ಭಾಗವಹಿಸಿದ್ದರು.
ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದವರ ಪರಿಚಯ: 1. ಶಿವರಾಯಪ್ಪ ದೊಡ್ಡಕರಿಯಪ್ಪ ಜೋಗಿನ: ಶಿವರಾಯಪ್ಪ ದೊಡ್ಡಕರಿಯಪ್ಪ ಜೋಗಿನರವರು ಬಿಇ ಎಲ್‌ಎಲ್‌ಎಂ ಪದವೀಧರರು ಹಾಗೂ ಕುರುಬ ಸಮುದಾಯದ ಮುಖಂಡರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ದಿವಂಗತ ಅನಂತ್ ಕುಮಾರ್‌ರವರ ಒಡನಾಟದಲ್ಲಿ ಬೆಳೆದವರು. ವಿದ್ಯಾರ್ಥಿ ವಯಸ್ಸಿನಲ್ಲಿ ರಾಷ್ಟ್ರ ಮಟ್ಟದ ಕ್ರೀಡಾ ಪಟುವಾಗಿ, ವಿದ್ಯಾರ್ಥಿ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಈಗ 45 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ. ವಿಜಯಪುರ ಹಾಗು ಬಾಗಲಕೋಟೆ ಜಿಲ್ಲೆಯಲ್ಲಿ ಜನಪ್ರಿಯತೆ ಗಳಿಸಿ, ಜಿಲ್ಲಾ ಸ್ಥಾಯಿ ಸಮಿತಿ ಸದಸ್ಯರಾಗಿ ರಾಜಕೀಯ ಪಕ್ಷದಲ್ಲಿ ರಾಜ್ಯ ಮಟ್ಟದ ಹಲವು ಸಂಘಟನಾತ್ಮಕ ಹುದ್ದೆಯನ್ನು ನಿರ್ವಹಿಸಿದ್ದಾರೆ.
ಇಂದು ಅವರೊಂದಿಗೆ ಒಂದು ದೊಡ್ಡ ರಾಜಕೀಯ ಶಕ್ತಿಯೇ ಆಮ್ ಆದ್ಮಿ ಪಾರ್ಟಿಯನ್ನು ಸೇರುತ್ತಿದೆ.
2. ಮುತ್ತಪ್ಪ ಕೋಮರ್: ಇವರು MSc ಪದವೀಧರರು, ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮನೋಭಾವವನ್ನು ಹೊಂದಿದ್ದು. ದಶಕಗಳಿಂದಲೂ ತಮ್ಮನ್ನು ರೈತರ ಸೇವೆಗೆ ಮತ್ತು ರೈತ ರಕ್ಷಣೆಗಾಗಿ ತೊಡಗಿಸಿಕೊಂಡಿದ್ದಾರೆ. ರೈತ ಸಂಘದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಬಿಜೆಪಿಯಲ್ಲಿ ತಾಲೂಕು ಪ್ರದಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. 2015ರಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ರಾಜ್ಯ ರೈತ ಸಂಘದಿಂದ ಆಯ್ಕೆಯಾಗಿದ್ದರು. ಅಲ್ಲಿ ಅವರ ಸೇವೆಗೆ ಅಪಾರ ಜನಮನ್ನಣೆ ಸಿಕ್ಕಿದೆ. ಬಾಗಲಕೋಟೆಯಲ್ಲಿ ಒಬ್ಬ ಮಾದರಿ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
3. ಅನಿಲ್ ಕುಮಾರ್ ಬೇಗಾರ್: ನಾಗರತ್ನ ಶಿಕ್ಷಣ ಮತ್ತು ಕಲ್ಯಾಣ ಸೇವೆಗಳ ಸಂಸ್ಥೆಯ ಮುಖ್ಯಸ್ಥರು. ಸಂಸ್ಥೆಯ ಮೂಲಕ ಸದಾಕಾಲ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಜನಪರ ಕೆಲಸಗಳನ್ನು ಮೆಚ್ಚಿ ಕೊಯಮುತ್ತೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇವರಿಗೆ 14 ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. 2018-19 ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 13 ವರ್ಷಗಳಿಂದ ಸಕ್ರೀಯ ರಾಜಕಾರಣದಲ್ಲಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ತಮ್ಮ ನಾಯಕತ್ವದಲ್ಲಿ ಸಾಧನೆಯ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ.
4. ಸಂಜೀವ್ ಕುಮಾರ್ ಕುಲಕರ್ಣಿ: ಸುಮಾರು ೩೫ ವರ್ಷಗಳಿಂದ ಸಕ್ರೀಯ ರಾಜಕಾರಣದಲ್ಲಿ ಸೇವೆ ಸಲ್ಲಿಸುತ್ತಿದ್ದು 1995 ಅಖಂಡ ಧಾರವಾಡ ಜಿಲ್ಲೆಯ ಯುವ ಜನತಾದಳದ ಅಧ್ಯಕ್ಷರಾಗಿದ್ದರು. 1999 ಮತ್ತು 2007 ನರೇಗಲ್ಲ ಪಟ್ಟಣ ಪಂಚಾಯಿತಿಯ ಸದಸ್ಯರಾಗಿ ಆಯ್ಕೆಯಾದರು. ಆಗ ಆಡಳಿತ ಪಕ್ಷದ ಅಧ್ಯಕ್ಷರಾಗಿದ್ದರು ಮತ್ತು ಸಧ್ಯಕ್ಕೆ ಸಮಾಜ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
5. ಸಾ.ಸಿ. ಬೆನಕನಳ್ಳಿ, ಕಲಬುರ್ಗಿ: ಇವರು ಬಿ.ಎ. ಪದವೀಧರರು. ನೆಹರು ಯುವಕರ ಸಂಘದ ನಿರ್ದೇಶಕರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ತಾಲೂಕು ಪಂಚಾಯತ ಸದಸ್ಯರಾಗಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿದಂತೆ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈಗ ʻಕಲ್ಬುರ್ಗಿ ಕಲರವʼ ಮತ್ತು ʻಬೆನಕ ಟೈಮ್ಸ್ʼ ಮಾಸಿಕ ಪತ್ರಿಕೆ ಪ್ರಧಾನ ಸಂಪಾದಕರಾಗಿದ್ದಾರೆ.
6. ಡಾ. ಗೀತಾ ಮಹಾಂತೇಶ್ ಯಾಡಿಗಿ. BAMS, PGDCS: ವಿದ್ಯಾರ್ಥಿ ದೆಸೆಯಿಂದಲೇ NCCಯಲ್ಲಿ ರಾಜ್ಯಕ್ಕೆ ಅತ್ಯುತ್ತಮ ಕೆಡೆಟ್ ಎಂಬ ಬಿರುದು ಪಡೆದವರು. ರಾಷ್ಟ್ರೀಯ ಮಟ್ಟದ ಕ್ರೀಡಾ ವಲಯದಲ್ಲಿ ಚಿನ್ನದ ಪದಕ ಗೆದ್ದವರು. ಈಗ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ರಾಜ್ಯ ಮಹಿಳಾ ಅಧ್ಯಕ್ಷರಾಗಿ ಕಾರ್ಮಿಕರ ಹಿತರಕ್ಷಣೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
7. ಶ್ರೀನಿವಾಸ್ ಗೌಡ: ವಿಜ್ಞಾನ ವಿಷಯದಲ್ಲಿ ಡಾಕ್ಟರೇಟ್ ಪಡೆದು ಬಾಗಲಕೋಟೆಯಲ್ಲಿ ಶಿಕ್ಷಣ ವೃತ್ತಿ ಮಾಡಿದವರು. ಇತ್ತೀಚಿಗೆ ಸ್ವಯಂ ನಿವೃತ್ತಿ ಹೊಂದಿದ್ದಾರೆ. ಅಧ್ಯಾಪಕರ ಸಂಘದ ಒಕ್ಕೂಟಗಳ ಸಂಘದ ಅಧ್ಯಕ್ಷರು. 2022ರಲ್ಲಿ ನಡೆದ ಶಿಕ್ಷಕರ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು.
8. ಬಸವರಾಜ ರಾಮನಹಳ್ಳಿ: ಪುರಸಭಾ ಸದಸ್ಯರಾಗಿ ಸೇವೆ, ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಬಸವ ಜಾಗೃತಿ ಕೇಂದ್ರ ಜಿಲ್ಲಾ ಅಧ್ಯಕ್ಷರು, ಮುಂಡರಿಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ. MSW, M.Phil ಉದ್ಯಮಿಯಾಗಿದ್ದಾರೆ.
9. ಹುಲಗಪ್ಪ ಚುರಿ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನವರು. ಯುವ ನ್ಯಾಯವಾದಿಗಳು. ನ್ಯಾಯವಾದಿ ಸಂಘದ ಪದಾಧಿಕಾರಿಗಳು. ಹಲವಾರು ವರ್ಷಗಳಿಂದ ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥರು.
10. ಸೋಮಣ್ಣ ಮಲ್ಲೂರು: ಇವರು ಪತ್ರಕರ್ತರು. ಚಿಕ್ಕ ವಯಸ್ಸಿನಿಂದಲೇ ಪತ್ರಿಕೋದ್ಯಮದಲ್ಲಿ ಆಸಕ್ತಿ ಮತ್ತು ಕೆಲಸ. ಕರ್ನಾಟಕ ರಾಜ್ಯ ಹಾಲುಮತ ಮಹಾಸಭಾ ಸಂಘದ ಯುವ ಘಟಕದ ಅಧ್ಯಕ್ಷರು.