ಶಿರಾ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದಿನಬೆಳಗಾದರೆ ಸರಣಿ ಅಪಘಾತ, ಹಲವಾರು ಮಂದಿ ಸಾವು ಎಂಬ ಮಾಹಿತಿ ಬರುತ್ತಲೇ ಇದೆ.
ಇನ್ನುರಾಜ್ಯದಲ್ಲಿ ಅಪಘಾತ ಘಟನೆಗಳು ಮುಂದುವರಿದಿದ್ದು, ಗುರುವಾರ ಮುಂಜಾನೆ ತುಮಕೂರು ಜಿಲ್ಲೆಯ ಶಿರಾ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ.
ಇಂದು ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದ್ದು, ಕ್ರೂಸರ್ ನಲ್ಲಿದ್ದವರೆಲ್ಲಾ ರಾಯಚೂರು ಜಿಲ್ಲೆಯ ಕೂಲಿ ಕಾರ್ಮಿಕರು ಎಂದು ತಿಳಿದುಬಂದಿದೆ. ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಈ ಘೋರ ದುರಂತ ಸಂಭವಿಸಿದೆ.
ಗುರುವಾರ ನಸುಕಿನ ಜಾವ ರಾಯಚೂರು ಜಿಲ್ಲೆ ಹಾಗೂ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರನ್ನು ಹೊತ್ತ ಕ್ರೂಸರ್ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು. ಶಿರಾ ಬಳಿ ಬರುತ್ತಿದ್ದಾಗ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಕ್ರೂಸರ್ಡಿಕ್ಕಿಯಾಗಿ ಸ್ಥಳದಲ್ಲಿಯೇ 9 ಜನ ಕಾರ್ಮಿಕರು ಮೃತಪಟ್ಟಿದ್ದಾರೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಕ್ರೂಸರ್ನಲ್ಲಿ 20 ಜನರಿದ್ದರು. ಅವರೆಲ್ಲ ರಾಯಚೂರು ಜಿಲ್ಲೆಯರು ಎನ್ನಲಾಗುತ್ತಿದೆ. ಇನ್ನು ಮೂವರು ಮಹಿಳೆಯರು, ನಾಲ್ವರು ಪುರುಷರು, ಇಬ್ಬರು ಮಕ್ಕಳು ಸೇರಿ ಒಟ್ಟು 9 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ.
11 ಜನ ಗಾಯಾಳುಗಳನ್ನು ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
ಗದಗದಲ್ಲಿ ಅಪಘಾತ: ಬುಧವಾರ (ನಿನ್ನೆ) ಸಂಜೆ ಸರ್ಕಾರಿ ಬಸ್ ಹರಿದು ಬೈಕ್ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗದಗ ನಗರದ ಹೊರವಲಯದ ಹೊಂಬಳ ರಸ್ತೆಯಲ್ಲಿ ನಡೆದಿತ್ತು. ಬಸ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಚಿಕಿತ್ಸೆಗೆ ಗದಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೃತ ಬೈಕ್ ಸವಾರ ಗದಗ ತಾಲೂಕಿನ ಲಿಂಗದಾಳ ಗ್ರಾಮದ ನಿವಾಸಿ ಹನುಮಂತಪ್ಪ ಛಲವಾದಿ(48) . ಹನುಮಂತಪ್ಪ ತನ್ನ ಅಳಿಯ ರೋಹಿತ್ ಜೊತೆಗೆ ಲಿಂಗದಾಳ ಗ್ರಾಮದಿಂದ ಬೈಕ್ ಹಿಂಬದಿ ಕುಳಿತು ಗದಗಕ್ಕೆ ಹೊರಟಿದ್ದರು. ಈ ವೇಳೆ ನಗರದ ಹೊರವಲಯದಲ್ಲಿ ಟ್ರ್ಯಾಕ್ಟರ್ ಅನ್ನು ಓವರ್ ಟೇಕ್ ಮಾಡಲು ಹೋಗಿ ಗದಗದಿಂದ ಬರುತ್ತಿದ್ದ ಬಸ್ಗೆ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ.
ಬೈಕ್ ಸವಾರ ರೋಹಿತ್ಗೆ ಸಣ್ಣಪುಟ್ಟ ಗಾಯಳಾಗಿದ್ದು, ಹಿಂಬದಿ ಕುಳಿತ ಹನುಮಂತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ. ಬಸ್ನಲ್ಲಿದ್ದ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಇನ್ನು ಹುಬ್ಬಳಿಯಲ್ಲಿ ಹಿಂದಿನಿಂದ ಬಂದ ಲಾರಿ ಬೈಕ್ಗೆ ಡಿಕ್ಕಿಹೊಡೆದು ದಂಪತಿ ಮತ್ತು ಮಗು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ವರದಿಯಾಗಿದೆ.
ಇನ್ನು ಶಿರಾಬಳಿ ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಮಡಿದ ಕುಟುಂಬದವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಪ್ರಧಾನಿ ಮೋದಿ ಅವರು ಘೊಷಿಸಿದ್ದಾರೆ.