ಮೈಸೂರು: ನಗರದ ಆರ್ಬಿಐ ಹಿಂಭಾಗದ ಶ್ಯಾದನಹಳ್ಳಿಯಲ್ಲಿ ಇರಿಸಿದ್ದ ಬೋನಿಗೆ ಸುಮಾರು ಎರಡ- ಮೂರು ವರ್ಷದ ಗಂಡು ಚಿರತೆ ಬಿದ್ದಿದೆ.
ಶ್ಯಾದನಹಳ್ಳಿಯ ತೋಟದಲ್ಲಿ ಇರಿಸಿದ್ದ ಬೋನಿನಲ್ಲಿ ಭಾನುವಾರ ರಾತ್ರಿ ಸೆರೆಯಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ವಲಯ ಅಧಿಕಾರಿ ಆರ್ಎಫ್ಒ ಕೆ.ಸುರೇಂದ್ರ ಮತ್ತು ಸಿಬ್ಬಂದಿಯವರು ಆಗಮಿಸಿ, ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲು ಇಲ್ಲಿಂದ ರವಾನಿಸಿದ್ದಾರೆ.
ಸುಮಾರು ಮೂರು-ನಾಲ್ಕು ತಿಂಗಳಿನಿಂದಲೂ ಜಿಲ್ಲೆಯ ವಿವಿಧೆಡೆ ಚಿರತೆಗಳ ಕಾಟ ಹೆಚ್ಚಾಗಿದ್ದು, ತಿ.ನರಸೀಪುರದ ನರಭಕ್ಷಕ ಚಿರತೆಯನ್ನು ಕಳೆದ ಜನವರಿ 26ರಂದು ಸೆರೆ ಹಿಡಿದ್ದರು. ಆ ವೇಳೆ ಸೆರೆ ಸಿಕ್ಕ ಚಿರತೆಯನ್ನು ಸಾಯಿಸಿಬಿಡಿ ಎಂದು ಅಲ್ಲಿನ ಜನರು ಒತ್ತಾಯವನ್ನು ಮಾಡಿದ್ದರು.
ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದ ಅಂಗಡಿಗೆ ಬಿಸ್ಕತ್ ತರಲು ಹೋಗಿದ್ದ 11 ವರ್ಷದ ಬಾಲಕ ಜಯಂತ್ನನ್ನು ಸ್ಥಳದಲ್ಲೇ ಕೊಂದು ಹಾಕಿದ್ದ, ನರಹಂತಕ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಅಂದು ಬೆಳಗ್ಗಿನ ಜಾವ ಬಿದ್ದಿತ್ತು. ಅದಾದ ಬಳಿಕ ಇಂದು ಮತ್ತೊಂದು ಚಿರತೆ ಸೆರೆಯಾಗಿದ್ದು ಜಿಲ್ಲೆಯ ಜನರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಆದರೆ, ಚಿರತೆಯ ಮರಿಗಳು ಜಿಲ್ಲೆಯಲ್ಲಿ ಹೆಚ್ಚಾಗಿದ್ದು ಅವುಗಳನ್ನು ಸೆರೆ ಹಿಡಿಯಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ.
ಒಟ್ಟಾರೆ ತಿ.ನರಸೀಪುರ ಜಿಲ್ಲೆಯಲ್ಲೇ ಕಳೆದ ಮೂರು ತಿಂಗಳಿನಿಂದ ಈಚೆಗೆ ಒಬ್ಬ ಯುವಕ, ಯುವತಿ ಹಾಗೂ ಓರ್ವ ಬಾಲಕ ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಇನ್ನು ಮೈಸೂರು ನಗರದಲ್ಲೂ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ಸೆರೆ ಹಿಡಿಯುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.