ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದಿಂದ ಶನಿವಾರ ಸಾತಗಳ್ಳಿ ಮತ್ತು ದೇವನೂರು ಗ್ರಾಮಗಳಲ್ಲಿನ ಖಾಸಗಿಯವರು ಅಭಿವೃದ್ಧಿಪಡಿಸಿದ್ದ ನಾಲ್ಕು ಅನಧಿಕೃತ ಬಡಾವಣೆಗಳನ್ನು ತೆರವುಗೊಳಿಸಲಾಯಿತು.
ಭೂ ಪರಿವರ್ತನೆ ಮಾಡಿಕೊಳ್ಳದೇ ಮತ್ತು ಪ್ರಾಧಿಕಾರದಿಂದ ಅನುಮೋದಿತ ನಕ್ಷೆ ಪಡೆಯದೆ ಸಾತಗಳ್ಳಿಯ ಸರ್ವೇ ನಂ.65, 27/3, 2/3 ಹಾಗೂ ದೇವನೂರು ಗ್ರಾಮದ ಸರ್ವೇ ನಂ.25ರಲ್ಲಿ ಮಾಡಿಕೊಂಡಿದ್ದ ಬಡಾವಣೆಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ನೇತೃತ್ವದಲ್ಲಿ ನಡೆದ ತೆರವು ಕಾರ್ಯಾಚರಣೆ ಬಳಿಕ ಅನಧಿಕೃತ ಬಡಾವಣೆಗಳ ವಿರುದ್ಧ ಕ್ರಮ ಜರುಗಿಸುವ ಸಂದೇಶವನ್ನು ಮುಡಾ ಅಧಿಕಾರಿಗಳು ರವಾನಿಸಿದರು. ಇದೇ ವೇಳೆ ಸಾತಗಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದ ರಸ್ತೆ ಒತ್ತುವರಿಯನ್ನು ಕೂಡ ತೆರವುಗೊಳಸಲಾಯಿತು.
ಸಾರ್ವಜನಿಕರು, ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯೊಳಗೆ ನಿವೇಶನ ಖರೀದಿಸುವ ಮುನ್ನ ಬಡಾವಣೆಯು ‘ಮುಡಾ’ದಿಂದ ಅನುಮೋದನೆ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಇಲ್ಲದಿದ್ದಲ್ಲಿ ಅನಧಿಕೃತ ಬಡಾವಣೆಗಳ ಬಗ್ಗೆ ತಿಳಿದಲ್ಲಿ ಪ್ರಾಧಿಕಾರದ ಗಮನಕ್ಕೆ ತರಬೇಕು. ಅಂತಹ ಅನಧಿಕೃತ ಬಡಾವಣೆಗಳನ್ನು ನಿರ್ದಾಕ್ಷಿಣ್ಯವಾಗಿ ಧ್ವಂಸಗೊಳಿಸಲಾಗುವುದು ಎಂದು ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ತಿಳಿಸಿದ್ದಾರೆ.
ಪ್ರಾಧಿಕಾರದ ಕಾರ್ಯದರ್ಶಿ ಡಾ.ಎನ್.ಸಿ.ವೆಂಕಟರಾಜು ಹಾಗೂ ಕಾರ್ಯಪಾಲಕ ಇಂಜಿನಿಯರ್‌ಗಳಾದ ಮೋಹನ್, ಸುನೀಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.