ಬೆಂಗಳೂರು: ಮಹಾನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೂಢಿಗತ ಕನ್ನ ಕಳುವು ಮಾಡುತ್ತಿದ್ದ ಕುಖ್ಯಾತ ಮೂವರು ಆರೋಪಿಗಳನ್ನು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಸೆರೆಹಿಡಿದು 2.12ಕೋಟಿ ರೂ. ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಂಡ ಅಶೋಕನಗರ ಠಾಣೆ ಪೊಲೀಸ್ ತಂಡದ ಕಾರ್ಯ ಶ್ಲಾಘನೀಯ ಎಂದು ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಕಳ್ಳರನ್ನು ಬೇಟೆಯಾಡಿದ ಪೊಲೀಸ್ ಸಿಬ್ಬಂದಿಗೆ 75,000 ರೂ. ಬಹುಮಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಳವು ವಿವರ: ಚಿಕ್ಕಮಗಳೂರು ಮೂಲದ ಮಹಮ್ಮದ್ ತೌಫೀಕ್, ಬಳ್ಳಾರಿ ಮೂಲದ ಶೇಖ್ ಷಾ ವಾಲಿ (34) ಒರಿಸ್ಸಾ ಮೂಲದ ಲಂಭೋಧರ (22) ಬಂಧಿತ ಆರೋಪಿಗಳು. ಮಹಮ್ಮದ್ ತೌಫೀಕ್ ಬೆಂಗಳೂರು ನಗರದ ವಿವಿಧ ಕಡೆ ಸೇರಿ ನೆಲಮಂಗಲ, ತುಮಕೂರು, ಚಿಕ್ಕಮಗಳೂರು ಹಾಗೂ ಹಲವು ಕಡೆಗಳಲ್ಲಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದನು ಎಂದು ತಿಳಿಸಿದ್ದಾರೆ.
ವಿವೇಕ ನಗರ ಪೊಲೀಸರು ಮನೆ ಕಳ್ಳತನ ಮಾಡುತ್ತಿದ್ದ ಬಳ್ಳಾರಿ ಮೂಲದ ಶೇಖ್ ಷಾ ವಾಲಿಯನ್ನು ಬಂಧಿಸಿ, ಆತನಿಂದ ಸುಮಾರು 17 ಲಕ್ಷ ರೂ. ಬೆಲೆ ಬಾಳುವ 355 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಕಾರ್ಯನಿರ್ವಹಿಸುತ್ತಿದ್ದ ಚಿನ್ನಾಭರಣ ಅಂಗಡಿಯಲ್ಲೇ ಕಂಪ್ಯೂಟರ್ ದಾಖಲೆ ತಿದ್ದಿ, ಚಿನ್ನ ಕಳ್ಳತನ ಮಾಡುತ್ತಿದ್ದ ಒರಿಸ್ಸಾ ಮೂಲದ ಲಂಭೋಧರನನ್ನು ಬಂಧಿಸಿ, ಆತನಿಂದ 1 ಕೋಟಿ ರೂ. ಮೌಲ್ಯದ 1.5 ಕೆ.ಜಿ. ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿ ಬೆಂಗಳೂರು ನಗರದ ಕಬ್ಬನ್ ಪಾರ್ಕ್ ಠಾಣಾ ಸರಹದ್ದಿನ ಎಂ.ಜಿ.ರಸ್ತೆಯ ನವರತನ್ ಜುವೆಲ್ಲರಿ ಅಂಗಡಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದು, ಅಂಗಡಿಯ ಮಾಲೀಕರಿಗೆ ಗೊತ್ತಾಗದಂತೆ ಕಂಪ್ಯೂಟರ್‌ನಲ್ಲಿ ಚಿನ್ನದ ದಾಖಲೆಗಳನ್ನು ತಿದ್ದಿ, ಮಾಲೀಕರನ್ನು ಮೋಸ ಮಾಡಿ ಚಿನ್ನ ಕಳ್ಳತನ ಮಾಡಿಕೊಂಡು ಒರಿಸ್ಸಾ ರಾಜ್ಯಕ್ಕೆ ಪರಾರಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.