ಬೆಂಗಳೂರು: ನನ್ನ ಪುತ್ರ ಡಾ. ಗೋಪಾಲ ಕಾರಜೋಳ 23 ದಿನಗಳಿಂದ ವೆಂಟಿಲೇಟರ್ನಲ್ಲಿದ್ದಾನೆ. ಈತನು ಸೇರಿ ಕುಟುಂಬದ ಎಂಟು ಮಂದಿ ಕೋವಿಡ್ ಬಾಧಿತರಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಶಿರಾ ಬೈ ಎಲೆಕ್ಷನ್ನ ಪಕ್ಷದ ಅಭ್ಯರ್ಥಿ ಡಾ.ರಾಜೇಶ್ ಗೌಡ ನಾಮಪತ್ರ ಸಲ್ಲಿಕೆಯ ವೇಳೆ ಹಾಜರಾಗಿದ್ದ ಕಾರಜೋಳ ಅವರಿಗೆ, ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡದೇ ಇರುವ ಆಪಾದನೆ ಎದುರಾಗಿದೆ. ಈ ಸಂದರ್ಭದಲ್ಲಿ ಕಾರಜೋಳ, ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ನನ್ನ ಕುಟುಂಬಕ್ಕೆ ಎದುರಾಗಿರುವ ಇಂಥ ಸಂಕಷ್ಟದ ಸಂದರ್ಭದಲ್ಲಿ ಒಂದು ಘಟನೆಯಿಂದ ಅಳೆಯಲು ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.
ನನ್ನ ಪುತ್ರ 23 ದಿನಗಳಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನನ್ನ ಪತ್ನಿ ಕೂಡಾ ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿ ಇದೀಗ ಹಿಂದಿರುಗಿದ್ದಾರೆ. ನಾನೂ ಕೂಡಾ ಕೋವಿಡ್ 19ಕ್ಕೆ ಒಳಗಾಗಿ ಗುಣಮುಖನಾಗಿ ಹಿಂದಿರುಗಿದ್ದೇನೆ.
ನಮ್ಮ ಕುಟುಂಬದಲ್ಲಿ ಒಟ್ಟಾರೆ 8 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದೇವೆ. ಇದು ವಸ್ತುಸ್ಥಿತಿ. ಇಂತಹ ಗತ್ಯಂತರ ಸಂದರ್ಭದಲ್ಲಿ ನಾನು ಎಲ್ಲೂ ಹೊರಗಡೆ ಹೋಗುವುದು ಸೂಕ್ತವಲ್ಲ. ಅನಿವಾರ್ಯವಿದ್ದ ಪ್ರಸಂಗದಲ್ಲಿ ಮಾತ್ರ ಮುನ್ನೆಚ್ಚರಿಕೆಯಿಂದ ಆಯಾಸವಾಗದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವೈದ್ಯರ ಸಲಹೆ ಇದೆ. ದೂರದ ಪ್ರಯಾಣ
ನಿಷಿದ್ಧ ಎಂಬುದು ವೈದ್ಯರು ಕೊಟ್ಟಿರುವ ಎಚ್ಚರಿಕೆ. ಈ ಎಲ್ಲಾ ಅಂಶಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಗಮನದಲ್ಲಿದೆ. ಅವರೂ ಕೂಡಾ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸೂಚಿಸಿದ್ದಾರೆ.
ಸಾರ್ವಜನಿಕ ಬದುಕಿನಲ್ಲಿರುವವರ ವೈಯಕ್ತಿಕ ಸಂತಸ- ಸಂಕಟಗಳು ಸಾರ್ವಜನಿಕರಿಗೆ ಅಷ್ಟಾಗಿ ತಿಳಿದಿರುವುದಿಲ್ಲ. ಸಂತಸಗಳು ಕೆಲವೊಮ್ಮೆ ಹೊರಗೆ ಬರುತ್ತವೆ. ಆದರೆ ಸಂಕಷ್ಟಗಳು ಯಾವತ್ತಿಗೂ ಅನಾಥ. ಅದನ್ನು ಅನುಭವಿಸಿದವರಿಗಷ್ಟೇ ಅದರ ಪ್ರಖರತೆ ಗೊತ್ತು. ಇದರ ಪರಿಣಾಮವಾಗಿ ಸಾರ್ವಜನಿಕ ಬದುಕಿನಲ್ಲಿರುವವರ ಹಾಜರಿ ಅಥವಾ ಗೈರುಹಾಜರಿಗಳನ್ನು ಕನ್ನಡಕ ಹಾಕಿ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಲಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.