ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬಿಎಂಟಿಸಿ ನೌಕರರಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಉಳಿಸಿಕೊಂಡಿದ್ದ ಅರ್ಧ ವೇತನ ನೀಡಲು ಸರ್ಕಾರ 94.64 ಕೋಟಿ ರೂ. ಬಿಡುಗಡೆ ಮಾಡಿದೆ.
ಈ ಕುರಿತು “ವಿಜಯಪಥ”ದೊಂದಿಗೆ ಮಾತನಾಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸಿ. ಶಿಖಾ ಅವರು, ಸರ್ಕಾರ ಹಣ ಬಿಡುಗಡೆ ಮಾಡಿದ್ದು, ನೌಕರರ ಬ್ಯಾಂಕ್ ಖಾತೆಗಳಿಗೂ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಡಿಸೆಂಬರ್ ಮತ್ತು ಜನವರಿಯಲ್ಲಿ ಬಿಎಂಟಿಸಿ ನೌಕರರಿಗೆ ಅರ್ಧವೇತನ ನೀಡಿದ್ದು ಉಳಿದ ಅರ್ಧವೇತನವನ್ನು ಶೀಘ್ರದಲ್ಲೇ ಕೊಡಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಕೂಡ ತಿಳಿಸಿದ್ದರು. ಅದರಂತೆ ಸರ್ಕಾರ ಹಣ ಬಿಡುಗಡೆ ಮಾಡಿದೆ.
ಬಿಎಂಟಿಸಿಯಲ್ಲಿ ಕೊರೊನಾ ಕಾರಣದಿಂದ ಉಂಟಾದ ಸಂಕಷ್ಟದಿಂದಾಗಿ ತನ್ನ ನೌಕರರ ಡಿಸೆಂಬರ್ ಮತ್ತು ಜನವರಿ ತಿಂಗಳ ವೇತನದಲ್ಲಿ ಅರ್ಧ ಸಂಬಳವನ್ನು ಮಾತ್ರ ನೀಡಲಾಗಿತ್ತು. ಇನ್ನರ್ಧ ನೀಡಲಾಗಿರಲಿಲ್ಲ.
ಈ ಸಂಬಂಧ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸಿ. ಶಿಖಾ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ ನೌಕರರ ವೇತನಕ್ಕಾಗಿ 94.64 ಕೋಟಿ ರೂಪಾಯಿ ಮಂಜೂರು ಮಾಡುವಂತೆ ಕೋರಲಾಗಿತ್ತು.
ಕೊರೊನಾ ಲಾಕ್ ಡೌನ್ ಉಂಟು ಮಾಡಿದ ಆರ್ಥಿಕ ಸಮಸ್ಯೆಯಿಂದ ಇನ್ನು ಹೊರಬಾರದ ಬಿಎಂಟಿಸಿಯ ಸ್ಥಿತಿಯನ್ನು ಗಮನಿಸಿದ ಸರ್ಕಾರ ನೌಕರರ ನೆರವಿಗೆ ಧಾವಿಸಿದೆ. ಅದಕ್ಕಾಗಿಯೇ ಸದ್ಯ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಸರ್ಕಾರ ಮಂಜೂರು ಮಾಡಿರುವ ಹಣದಿಂದಲೇ ಸಿಬ್ಬಂದಿಗೆ ಉಳಿದ ಸಂಬಳವನ್ನು ನೀಡಲಾಗುತ್ತದೆ ಎಂದು ಶಿಖಾ ತಿಳಿಸಿದ್ದಾರೆ.