ಕನಕಪುರ: ಓದಲು ಇಷ್ಟವಿಲ್ಲ ಬಾಲಕನೊಬ್ಬ ತನ್ನ ಪಾಲಕರನ್ನು ಭಯಗೊಳಿಸಲು ತನ್ನನ್ನು ಅಪಹರಣಮಾಡಿದ್ದಾರೆ ಎಂಬ ಸಂದೇಶವನ್ನು ಪಕ್ಕದ ಮನೆಯವರ ಮೊಬೈಲ್‌ಫೋನ್ ಕಳುಹಿಸುವ ಮೂಲಕ ತನ್ನ ಹೆತ್ತವರನ್ನೇ ಬೇಸ್ತು ಬೀಳಿಸಿರುವ ಘಟನೆ ರಾಮನಗರ ಜಿಲ್ಲೆ ಕನಕಪುರದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಬಟ್ಟೆ ಅಂಗಡಿ ಮಾಲೀಕ ಮನೋಹರ್ ಎಂಬುವವರ ಪುತ್ರ ಸರ್ವೇಶ್ (16) ಈ ನಾಟಕವಾಡಿ ಪೊಲೀಸರಿಗೂ ಕೆಲಸಕೊಟ್ಟ ಬಾಲಕ.
ಹೌದು..! ಸದಾ ಓದು ಎನ್ನುವ ಪೋಷಕರ ಕಾಟ ತಪ್ಪಿಸಿಕೊಳ್ಳಲು ಹಾಗೂ ಹಣಕ್ಕಾಗಿ ಅಪಹರಣದ ನಾಟಕ ಮಾಡಿದ್ದಾನೆ ಎಂಬುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ವಿವರ: ಕಳೆದ ಶುಕ್ರವಾರ ಸೈಬರ್ ಸೆಂಟರ್ಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ. ರಾತ್ರಿಯಾದರೂ ಮನೆಗೆ ವಾಪಸ್ ಬಾರದ ಕಾರಣ ಆತಂಕಗೊಂಡ ಪೋಷಕರು, ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ನಡುವೆ ಬಾಲಕ ಪಕ್ಕದ ಮನೆಯವರ ಮೊಬೈಲಿಗೆ ತನ್ನನ್ನು ಶೌಚಾಲಯದಲ್ಲಿ ಕೈ-ಕಾಲು ಕಟ್ಟಿ ಹಾಕಿರೋ ಸ್ಥಿತಿಯಲ್ಲಿರುವ ಫೋಟೋವನ್ನು ರವಾನಿಸಿ, 5 ಲಕ್ಷ ರೂಪಾಯಿಗೆ ಅಪಹರಣಕಾರರು ಬೇಡಿಕೆಯಿಟ್ಟಿದ್ದಾರೆ ಎಂದು ಸಂದೇಶ ಕಳುಹಿಸಿದ್ದ. ನಂತರ ಬಾಲಕನ ಫೋಟೋ ವೈರಲ್ ಆಗಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರು, ಬಾಲಕನನ್ನು ತಿರುಪತಿ ಬಳಿ ಲಾಡ್ಜ್ ನಲ್ಲಿ ಪತ್ತೆ ಹಚ್ಚಿದ್ದು, ಪೋಷಕರನ್ನು ಬೆದರಿಸಲು ಬಾಲಕನೇ ಅಪಹರಣದ ನಾಟಕವಾಡಿರುವುದು ಈ ವೇಳೆ ಪೊಲೀಸರಿಗೆ ಗೊತ್ತಾಗಿದೆ.
ಬಾಲಕ ಪೋಷಕರಿಂದ ಹಣ ಕೀಳಲು ಹಾಗೂ ಓದು ಎಂದು ಒತ್ತಾಯ ಮಾಡುವುದರಿಂದ ತಪ್ಪಿಸಿಕೊಳ್ಳಲು ಸ್ವಯಂ ಅಪಹರಣದ ನಾಟಕ ಸೃಷ್ಟಿಸಿದ್ದಾನೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ತಿಳಿಸಿದ್ದಾರೆ.
ಬಾಲಕನನ್ನು ತಿರುಪತಿಯಿಂದ ಕರೆತಂದು ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ. ಇನ್ನು ಬಾಲಕನಿಗೆ ಅಪಹರಣ ಎಂದು ಬಿಂಬಿಸಲು ಯಾರೆಲ್ಲ ಸಹಾಯ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ.