ಬೆಂಗಳೂರು: ಇತ್ತೀಚೆಗೆ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಕುಶಲ ಸ್ವಾಮಿ ಅವರನ್ನು ಪಕ್ಷದ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ಉಸ್ತುವಾರಿ ರೋಮಿ ಭಾಟಿ, ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಸಮ್ಮುಖದಲ್ಲಿ ನೇಮಕಾತಿ ಪತ್ರ ನೀಡಲಾಯಿತು.
ಇದೇ ವೇಳೆ ಬೆಂಗಳೂರು ನಗರ ಉಪಾಧ್ಯಕ್ಷರನ್ನಾಗಿ ಗಾರ್ಮೆಂಟ್ಸ್ ಉದ್ಯಮಿ ಮಾಯಾ ಪ್ರದೀಪ್, ವೈದ್ಯೆ ಪೂರ್ಣಿಮಾ ನಾಯ್ಡು, ಪ್ರತಿಮಾ ಮಲಾನಿ ಅವರನ್ನು ನೇಮಕ ಮಾಡಲಾಯಿತು.
ಅರವಿಂದ ಕೇಜ್ರಿವಾಲ್ ಅವರ ಆಡಳಿತ ವೈಖರಿ ಹಾಗೂ ಮಹಿಳೆಯರ ಪರವಾಗಿ ಜಾರಿಗೆ ತಂದಿರುವ ಯೋಜನೆಗಳಿಂದ ಪ್ರಭಾವಿತರಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಪಕ್ಷ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಈ ವೇಳೆ ಕುಶಲ ಸ್ವಾಮಿ ನುಡಿದರು.
ಕುಶಲ ಸ್ವಾಮಿ ಅವರ ಕಿರು ಪರಿಚಯ
ಭಾನುವಾರ ಕನ್ನಡ ಮಾಸ ಪತ್ರಿಕೆ, ಭಾನು ವಾಹಿನಿಯ ಸಹ ಸಂಪಾದಕಿ ಹಾಗೂ ತುಮಕೂರು ಜಿಲ್ಲೆಯ ಗೋಡೇಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ 26 ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳನ್ನು ಗ್ರಾಮ ಮಟ್ಟಕ್ಕೆ ಯಶಸ್ವಿಯಾಗಿ ತಲುಪಿಸಿದ್ದಾರೆ.
ಸಮಾಜಶಾಸ್ತ್ರದಲ್ಲಿ ಎಂ.ಎ. ಮಾಡಿರುವ ಇವರು ಮೂಲತಃ ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿಯ ಗೋಡೆಕೆರೆ ಗ್ರಾಮದವರು ಕಳೆದ 20 ವರ್ಷಗಳಿಂದ ಸಮಾಜ ಸೇವೆ ಹಾಗೂ ಸ್ರ್ತೀ ಸಬಲೀಕರಣ ಕಾರ್ಯದಲ್ಲಿ ತೊಡಗಿದ್ದಾರೆ.
ಚಿಕ್ಕನಾಯಕನಹಳ್ಳಿ ಒಂದರಲ್ಲೇ ಒಂದೂವರೆ ಸಾವಿರಕ್ಕೂ ಹೆಚ್ಚು ಸ್ವ ಸಹಾಯ ಗುಂಪುಗಳನ್ನು ರಚಿಸಿ ಅವುಗಳ ಪ್ರಗತಿಗೆ ದುಡಿದಿದ್ದಾರೆ.
2010 ರಿಂದ 2015ರ ತನಕ ಗ್ರಾಮ ಪಂಚಾಯಿತಿ ಸದಸ್ಯರಾಗಿ ಹಾಗೂ 30 ತಿಂಗಳುಗಳ ಕಾಲ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ ಇವರು ಚಿಕ್ಕನಾಯಕನಹಳ್ಳಿ ತಾಲ್ಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳ ಒಕ್ಕೂಟದ ಚುಕ್ಕಾಣಿ ಹಿಡಿದು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು ತಮ್ಮ ವ್ಯಾಪ್ತಿಯ ಹಳ್ಳಿಗಳಿಗೆ ತಲುಪಿಸಲು ಸಾಕಷ್ಟು ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ.
ಯುನಿಯನ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ 5 ವರ್ಷಗಳ ರಾಜ್ಯ ಸಂಯೋಜಕರಾಗಿ ಕೆಲಸ ನಿರ್ವಹಿಸಿದ ಅನುಭವ. ಗುಡಿಸಲು ಮುಕ್ತ, ಬಯಲು ಶೌಚ ಮುಕ್ತ ಹಾಗೂ ಸಂಪದ್ಭರಿತ ಗ್ರಾಮಗಳ ನಿರ್ಮಾಣದ ಕನಸನ್ನು ಹೊತ್ತಿರುವ ಇವರು ಗ್ರಾಮೀಣ ಭಾಗದ ಮಹಿಳೆಯರ ಉದ್ದಾರಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ.
ಬೆಂಗಳೂರಿನ ರಾಜಾಜಿನಗರ ಮಹಿಳಾ ಒಕ್ಕೂಟಕ್ಕೆ 5 ವರ್ಷಗಳ ಕಾಲ ಅಧ್ಯಕ್ಷೆಯಾಗಿದ್ದ ಇವರು 70 ಸಾವಿರ ಮಹಿಳಾ ಗಾರ್ಮೆಂಟ್ಸ್ ನೌಕರರಿಗೆ ಅವರ ಹಕ್ಕುಗಳ ಹಾಗೂ ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳದ ವಿರುದ್ದ ಹೋರಾಡುವ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಿದ್ದಾರೆ. ಲಯನ್ಸ್ ಕ್ಲಬ್ ಅಫ್ ಬೆಂಗಳೂರು ಕಿಂಗ್ಸ್ ಸಹಯೋಗದೊಂದಿಗೆ ಶಿವನಗರದಲ್ಲಿರುವ ಸಿದ್ದಗಂಗಾ ಶಾಲೆ ದತ್ತು ಪಡೆದು ಶಿಕ್ಷಣ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ.