ಬೆಂಗಳೂರು: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ನಡುವಿನ ನೀರು ಹಂಚಿಕೆ ವಿಷಯದ ಕುರಿತು ಸಮಾಲೋಚನೆ ನಡೆಸಿದರು.
ಪ್ರವಾಹದ ಸಂದರ್ಭದಲ್ಲಿ ಪರಸ್ಪರ ಸಹಕಾರ, ಮಾತುಕತೆ ಮೂಲಕ ಸೌಹಾರ್ದಯುತವಾಗಿ ಜಲ ವಿವಾದಗಳನ್ನು ಬಗೆಹರಿಸಿಕೊಳ್ಳುವ ಸಂಬಂಧ ಉಭಯ ನಾಯಕರು ಚರ್ಚಿಸಿದರು.
ಉಭಯ ರಾಜ್ಯಗಳ ನಡುವಿನ ಅಂತರ್ ರಾಜ್ಯ ಜಲ ವಿಷಯ ಮತ್ತು ನದಿ ನೀರು ಹಂಚಿಕೆ ಕುರಿತು ವಿಸ್ತೃತ ಚರ್ಚೆ ನಡೆಸಲು ಶೀಘ್ರದಲ್ಲಿ ಸಭೆ ನಡೆಸಲು ಸಹಮತ ವ್ಯಕ್ತಪಡಿಸಿದರು. ಈ ಕುರಿತಂತೆ ನವದೆಹಲಿಯಲ್ಲಿ ಶೀಘ್ರ ಸಭೆ ನಿಗದಿ ಮಾಡಿ ಈ ಸಂಬಂಧ ವಿಸ್ತೃತವಾಗಿ ಚರ್ಚೆಸೋಣ ಎಂದು ಪವಾರ್ ಭರವಸೆ ನೀಡಿದರು.
ಇದರ ಜತೆಗೆ ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ್ ಆರ್. ಪಾಟೀಲ್ ಅವರು ಇಂದು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು.
ರಾಜ್ಯದ ಸಚಿವ ಮುರುಗೇಶ್ ನಿರಾಣಿ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.