ಬೆಂಗಳೂರು: ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೊಸ ಶಿಷ್ಯ ವೇತನ ಯೋಜನೆ ಜಾರಿ ಮಾಡುವುದಾಗಿ ನೂತನ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಇಂದು ಪ್ರಮಾಣವಚನ ಸ್ವೀಕರಿಸಿದ ನಂತರ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ತಮ್ಮ ಕೊಠಡಿಯಲ್ಲಿ ಸರಳವಾಗಿ ಪೂಜೆ ನೆರವೇರಿಸಿದರು. ನಂತರ ಅಧಿಕಾರಿಗಳ ಜತೆ ಕಡತ ಪರಿಶೀಲನಾ ಸಭೆ ನಡೆಸಿದರು.
ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದು, ಅವು ಈ ಕೇಳಕಂಡಂತಿವೆ.
ಮೊದಲನೆಯದಾಗಿ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೊಸ ಶಿಷ್ಯ ವೇತನ ಯೋಜನೆ.
ಎರಡನೆಯದಾಗಿ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಮಾಸಾಶನ 1,000 ದಿಂದ 1,200 ರೂ.ಗೆ ಹೆಚ್ಚಳ. ಈ ಯೋಜನೆಗೆ 863 ಕೋಟಿ ರೂ. ಹೆಚ್ಚುವರಿ ವೆಚ್ಚ ಆಗಲಿದೆ.
ಮೂರನೆಯದಾಗಿ ಅಂಗವಿಕಲರ ವೇತನ 600 ರೂ. ಗಳಿಂದ 800 ರೂ.ಗೆ ಹೆಚ್ಚಳ
ನಾಲ್ಕನೆಯದಾಗಿ ವಿಧವಾ ವೇತನ 800 ರೂ.ಗೆ ಹೆಚ್ಚಳ. 17.25 ಲಕ್ಷ ಫಲಾನುಭವಿಗಳಿಗೆ ಲಾಭ ಸಿಗಲಿದೆ.
ಬೆಳಗ್ಗೆ 11 ಗಂಟೆಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೊಮ್ಮಾಯಿ ಅವರಿಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರತಿಜ್ಞಾವಿಧಿ ಸಮಾರಂಭಕ್ಕೂ ಮೊದಲು ಬಾಲಬ್ರೂಯಿ ಆಂಜನೇಯ ದೇವಾಲಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಇನ್ನೊಂದು ವಾರದಲ್ಲಿ ನೂತನ ಸಂಪುಟ ಸಹ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದ್ದು 15ದಿನದೊಳಗೆ ಸುಲಲಿತವಾದ ಆಡಳಿತ ಕೊಡಲು ಸಿದ್ಧತೆ ನಡೆಯುತ್ತಿದೆ.