ಬೆಂಗಳೂರು: ಬೊಂಬೆ ತಯಾರಕರಿಗೆ ಬಿಐಎಸ್ (ಭಾರತೀಯ ಮಾನಕ ಬ್ಯೂರೋ) ಮುದ್ರೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರ ಸಾಂಪ್ರದಾಯಿಕ ಕಲೆ ಅವಲಂಬಿಸಿರುವ ಬೊಂಬೆ ತಯಾರಕರ ಮೇಲೆ ಗದಾ ಪ್ರಹಾರ ಮಾಡಿದೆ. ಈ ನಿರ್ಧಾರವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬಿಐಎಸ್ ಪ್ರಮಾಣಪತ್ರ ಪಡೆಯಲು ಸಾವಿರಾರು ರೂಪಾಯಿ ವೆಚ್ಚ ಭರಿಸುವುದು ಸಣ್ಣ ಬೊಂಬೆಗಳ ತಯಾರಕರಿಗೆ ದುಬಾರಿ ಆಗಲಿದ್ದು, ದೇಶೀಯ ಬೊಂಬೆ ಉತ್ಪಾದಕರ ಭವಿಷ್ಯಕ್ಕೆ ಇದು ಮಾರಕವಾಗಲಿದೆ. ಕೇಂದ್ರದ ಈ ನಿರ್ಧಾರ ಗುಡಿ ಕೈಗಾರಿಕೆಗಳಿಗೆ ಮುಳ್ಳಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮನ್ ಕಿ ಬಾತ್’ ನಲ್ಲಿ ಚನ್ನಪಟ್ಟಣದ ವಿಶ್ವಖ್ಯಾತ ಆಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದ ಪ್ರಧಾನಿ ಮೋದಿ ಅವರು ಸಾಂಪ್ರದಾಯಕ ಬೊಂಬೆ ತಯಾರಕರ ಮೇಲೆ ಕೆಂಗಣ್ಣು ಬೀರಿದ್ದಾರೆ.
ಕೇವಲ ದೊಡ್ಡ ಉದ್ದಿಮೆದಾರರ ಹಿತಕಾಯುವ ಇಂತಹ ನಿರ್ಧಾರದಿಂದ ಆಟಿಕೆ ತಯಾರಿಕೆ ನಂಬಿ ಬದುಕುತ್ತಿರುವ ಲಕ್ಷಾಂತರ ಮಂದಿಯ ಉದ್ಯೋಗಕ್ಕೆ ಸಂಚಕಾರ ಬರಲಿದೆ ಎಂದು ತಿಳಿಸಿದ್ದಾರೆ.
ಬೊಂಬೆ ತಯಾರಕರಿಗೆ ಬಿಐಎಸ್ ಮುದ್ರೆ ಕಡ್ಡಾಯಗೊಳಿಸುವ ಕೇಂದ್ರದ ನಿರ್ಧಾರವನ್ನು ವಾಪಸು ಪಡೆಯುವ ಮೂಲಕ ಗುಡಿ ಕೈಗಾರಿಕೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.