ಬೆಂಗಳೂರು: ಹೀನ ಮನಸ್ಥಿತಿಯ ಬಿಜೆಪಿಯವರೇ ಇನ್ನಾದರೂ ಯುವಕರನ್ನು ಪ್ರಯೋಗದ ಶಿಶುಗಳನ್ನಾಗಿ ಮಾರ್ಪಾಡಿಸುವುದು ಬಿಟ್ಟು ಗೌರವಯುತವಾದ ರಾಜಕಾರಣ ಮಾಡಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಕಿಡಿ ಕಾರಿದರು.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ “ದಕ್ಷಿಣ ಕನ್ನಡ ಜಿಲ್ಲೆ ನಮ್ಮ ಹಿಂದುತ್ವದ ಪ್ರಯೋಗ ಶಾಲೆ” ಎಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದರ ಮೂಲಕ ಈ ದೇಶದ ಬಹುತ್ವಕ್ಕೆ ಹಾಗೂ ಸಹಿಷ್ಣುತೆಗೆ ಧಕ್ಕೆ ತಂದಿದ್ದಾರೆ. ಕೋಮು ಸಂಘರ್ಷವನ್ನು ಇಡೀ ರಾಜ್ಯಕ್ಕೆ ಹಬ್ಬಿಸಲು ಅಲ್ಲಿ ಸಭೆ ನಡೆಸಲಾಗಿದೆ. ಕೊಲೆಗಡುಕರ ಊರಾದ ಉತ್ತರ ಪ್ರದೇಶದ ಮುಜಾಫರ್ ನಗರ ಮಾದರಿಯಲ್ಲಿ ನೂರಾರು ಕೋಮು ದಳ್ಳುರಿಯ ನಗರಗಳನ್ನು ಸೃಷ್ಟಿಸಲು ಯೋಜನೆ ರೂಪಿಸಲಾಗಿದೆ ಎಂದು ಆರೋಪಿಸಿದರು.
ಈಗಾಗಲೇ ಗೋ ಹತ್ಯೆ ನಿಷೇಧ ಕಾಯ್ದೆ, ಬಲವಂತದ ಮತಾಂತರ ವಿರೋಧಿ ಕಾಯ್ದೆ ನಮ್ಮ ದೇಶದಲ್ಲಿ ಜಾರಿಯಲ್ಲಿದೆ. ಇರುವ ಕಾನೂನುಗಳನ್ನು ಬಿಟ್ಟು ಮತ್ತೆ ಇನ್ಯಾವ ಕಾನೂನು ತರುತ್ತೀರ ಎನ್ನುವುದೇ ಸೋಜಿಗದ ಸಂಗತಿ. ಈ ಎರಡು ಸಂಗತಿಗಳನ್ನು ಇಟ್ಟು ಕೊಂಡು ಜನರ ಭಾವನೆಗಳ ಜತೆ ಆಟ ಆಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಪ್ರತಿಯೊಬ್ಬ ವ್ಯಕ್ತಿ ಮದುವೆ ಆಗುವುದು ಅವನ ಇಚ್ಛೆಗೆ ಬಿಟ್ಟಂತಹ ಸಂಗತಿ. ಜತೆಗೆ ಪ್ರೀತಿ ಎನ್ನುವುದು ಸಹ ಖಾಸಗಿ ವಿಚಾರ, ಇಂತಹ ಖಾಸಗಿ ವಿಚಾರಗಳಿಗೆ ಮೂಗು ತೂರಿಸಿ ಅಸ್ತಿತ್ವದಲ್ಲೇ ಇಲ್ಲದ ‘ಲವ್ ಜಿಹಾದ್’ ಎನ್ನುವ ಆಚರಣೆಯನ್ನು ತಲೆಯೊಳಗೆ ತುರುಕಿ ಇದರ ತಡೆಗೆ ಕಾನೂನು ರೂಪಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಅವರ ಘೋಷಣೆ ಹಾಸ್ಯಸ್ಪದ. ಲವ್ ಜಿಹಾದ್ ಎನ್ನುವುದು ಬಿಜೆಪಿ ಹಾಗೂ ಮತಿಗೇಡಿಗಳು ಸೃಷ್ಟಿಸಿರುವ ಪದ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಮೋದಿ ಹಾಗೂ ರಾಜ್ಯ ಬಿಜೆಪಿಯ ಜನಪ್ರಿಯತೆ ದೀಪಾವಳಿ ಪಟಾಕಿಯಂತೆ “ಠುಸ್” ಆಗುತ್ತಿದೆ. ಆದ ಕಾರಣ ತಮ್ಮ ಆಡಳಿತದ ವೈಫಲ್ಯಗಳನ್ನು ಮರೆ ಮಾಚಲು ಈ ವಿಷಯಗಳನ್ನು ಮುನ್ನೆಲೆಗೆ ತರಲಾಗಿದೆ. ಎಲ್ಲೋ ಇರುವ ಕೋಮು ದಳ್ಳುರಿಯನ್ನು ಇಡೀ ರಾಜ್ಯಕ್ಕೆ ಹರಡಿಸಿ ಮತ್ತೊಮ್ಮೆ ಚುನಾವಣೆ ಗೆಲ್ಲುವ ಹುನ್ನಾರ. ಮಾನ್ಯ ಮುಖ್ಯಮಂತ್ರಿಗಳೇ ಜಾತ್ಯಾತೀತ ಆಶಯಗಳಿಗೆ ಬದ್ದರಾಗಿ “ಕೆಜೆಪಿ” ಕಟ್ಟಿದವರು ನೀವು, ನಿಮ್ಮ ಇತಿಹಾಸದಿಂದಲಾದರೂ ಈ ಇಳಿವಯಸ್ಸಿನಲ್ಲಿ ಬುದ್ದಿ ಕಲಿಯಿರಿ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಡಿದ್ದು ಹಾಡಹಗಲೇ ಶೂಟೌಟ್‌ಗಳು ನಡೆಯುತ್ತಿವೆ, ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ, ಮುಖ್ಯಮಂತ್ರಿಳಾದ ಯಡಿಯೂರಪ್ಪ ಅವರೇ ಹಿರಿಯ ನಾಯಕರಾಗಿ ಜವಾಬ್ದಾರಿಯಿಂದ ರಾಜ್ಯ ನಡೆಸಿ, ಕೋಮು ಸೌಹಾರ್ದತೆ ಹಾಳು ಮಾಡಿ ಶಾಂತಿಯುತವಾಗಿರುವ ರಾಜ್ಯವನ್ನು ಜಂಗಲ್ ರಾಜ್ಯ ಮಾಡದಿರಿ ಎಂದು ಹೇಳಿದರು.
ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಪುಡಿ ರೌಡಿಗಳ ರೀತಿ ವರ್ತಿಸುತ್ತಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ಸೌಲಭ್ಯಗಳನ್ನು ತರುವ ಕೆಲಸ ಮಾಡದೆ, ಪಕ್ಕದ ತಮಿಳು ನಾಡಿಗೆ ಹೋಗಿ ಮುರುಘ ದೇವರ ಹೆಸರಿನಲ್ಲಿ ರಾಜಕೀಯ ನಡೆಸುತ್ತಿದ್ದಾರೆ. ಅವರು ಈ ಹುದ್ದೆಯಲ್ಲಿರುವುದೇ ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.