ಬೆಂಗಳೂರು: ಉಪ ಚುನಾವಣೆಯಲ್ಲಿ ನಮ್ಮ ಸಮುದಾಯದ ನಾಯಕರೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅತ್ಯಂತ ಬಲಿಷ್ಠ ನಾಯಕ, ರಾಜ್ಯದ ಪ್ರಭಾವಿ ರಾಜಕಾರಣಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಕಾಂಗ್ರೆಸ್ಸೇ ಜಾತಿ. ಆದರೂ ಕೂಡ ಒಂದು ಸಮುದಾಯದ ನಾಯಕರು ನನ್ನನ್ನು ಹೀಗೆ ಟಾರ್ಗೆಟ್ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿನ ಒಂದು ಸಮುದಾಯದ ನಾಯಕರು ಮಾತ್ರ ನನ್ನನ್ನು ಟೀಕೆ ಮಾಡುತ್ತಿದ್ದಾರೆ. ನಾನು ಯಾವ ವಿಚಾರದಲ್ಲಿ ಜಾತಿ ರಾಜಕಾರಣ ಮಾಡುತ್ತಿದ್ದೇನೆ? ನನ್ನ ವಿರುದ್ಧ ಒಂದು ಸಮುದಾಯದ ನಾಯಕರೇ ಏಕೆ ಟೀಕೆ ಮಾಡುತ್ತಿದ್ದಾರೆ? ಇದು ಜಾತಿ ರಾಜಕಾರಣ ಅಲ್ಲವೇ? ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ.
ಶಿವಕುಮಾರ್ ಅವರು ತಮ್ಮ ವಿರುದ್ಧ ಕೇವಲ ಸದಾನಂದ ಗೌಡ, ಅಶ್ವಥ್ ನಾರಾಯಣ, ಆರ್.ಅಶೋಕ್, ಸಿ.ಟಿ ರವಿ, ಎಸ್.ಟಿ. ಸೋಮಶೇಖರ್ ಇವರೇ ಯಾಕೆ ಟೀಕೆ ಮಾಡುತ್ತಿದ್ದಾರೆ? ಕೇವಲ ಒಂದು ಸಮುದಾಯದ ನಾಯಕರೇ ಯಾಕೆ ಟೀಕೆ ಮಾಡುತ್ತಿದ್ದಾರೆ? ಯಡಿಯೂರಪ್ಪ ಅವರು ಯಾಕೆ ಮಾತನಾಡುತ್ತಿಲ್ಲ ಎಂದು ಬಿಜೆಪಿ ನಾಯಕರನ್ನು ಕೇಳಿದ್ದಾರೆ.
ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ತಮ್ಮ ಫೋಟೋ ಹಾಕಿಕೊಂಡು ಸೆಟ್‌ಅಪ್ ಬಾಕ್ಸ್ ಹಂಚುತ್ತಿರುವುದನ್ನು ಒಪ್ಪಿಕೊಡಿದ್ದಾರೆ. ಚುನಾವಣಾ ಆಯೋಗ ಬದುಕಿದ್ದರೆ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಜನಪ್ರತಿನಿಧಿ ಕಾಯ್ದೆ ಅಡಿಯಲ್ಲೂ ಕಾನೂನಿನ ಕ್ರಮ ಕೈಗೊಳ್ಳಬೇಕು. ಇನ್ನು ಚುನಾವಣಾ ಆಯೋಗ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಕ್ಷಣವೇ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದರು.