ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾಕ್ಷೇತ್ರದ ಉಪಚುನಾವಣೆಗೆ ನಾಮ ಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ನಾಯಕರು ಸೇರಿ ಅಭ್ಯರ್ಥಿಯೂ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್‍ಐಆರ್ ದಾಖಲಿಸಿದ್ದ ಇನ್ಸ್ ಪೆಕ್ಟರ್ ನವೀನ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಎಫ್‍ಐಆರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮತ್ತು ಇತರರ ವಿರುದ್ಧ ಆರೋಪ ದಾಖಲಿಸಲಾಗಿತ್ತು. ಇದು ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಅಧಿಕಾರಿಗಳು ಪಕ್ಷಪಾತ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಕೂಡ ದೂರು ನೀಡಿ ಇನ್ಸ್‌ಪೆಕ್ಟರ್ ನವೀನ್ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿತ್ತು.
ಸದ್ಯ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸೂಚನೆ ಮೇರೆಗೆ ನವೀನ್ ಅವರನ್ನು ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಮಲ್ಲೇಶ್ವರಂನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಅನಿಲ್ ಆರ್.ಪಿ. ಅವರನ್ನು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ನೇಮಿಸಲಾಗಿದೆ.