ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಗುರುವಾರ ಕಾಂಗ್ರೆಸ್ ಸಹ ಸದಸ್ಯರಾಗಿ ಅಧಿಕೃತ ಪ್ರವೇಶ ಮಾಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶರತ್ ಬಚ್ಚೇಗೌಡರು ಕಾಂಗ್ರೆಸ್ ಸೇರ್ಪಡೆಯಾದರು.
ಹೊಸಕೋಟೆ ಕ್ಷೇತ್ರಕ್ಕೆ ನಾನು ಗಾಳ ಹಾಕುತ್ತಲೇ ಇದ್ದೆ ನಮ್ಮ ಗಾಳಕ್ಕೆ ನೀವೆಲ್ಲ ಈಗ ಬಿದ್ದಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದೇ ವೇಲೆ ತಮಾಷೆ ಮಾಡಿದರು. ಇನ್ನು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕರಾದ ಅವರು ನಮ್ಮ ಪಕ್ಷಕ್ಕೆ ಸಹ ಸದಸ್ಯರಾಗಿ ಕೆಲಸ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ರಾಜಕೀಯ ಪಕ್ಷ ಸೇರಲು ಸಾಧ್ಯವಿಲ್ಲ. ಹೀಗಾಗಿ ಅವರು ವಿಪಕ್ಷ ನಾಯಕರಿಗೆ ಬೆಂಬಲ ಕೋರಿದ್ದಾರೆ ಅವರ ಬೆಂಬಲವನ್ನು ಸ್ವೀಕರಿಸಿ ನಾವು ಅವರನ್ನು ಬೆಂಬಲಿಸಿದ್ದೇವೆ ಎಂದು ತಿಳಿಸಿದರು.
ವಿಪಕ್ಷನಾಯಕ ಸಿದ್ದರಾಮಯ್ಯ ಮಾತನಾಡಿ, ನಾನು ಕಳೆದ ಬಾರಿ ಚುನಾವಣೆಯಲ್ಲಿ ಶರತ್ ವಿರುದ್ಧ ಪ್ರಚಾರ ಮಾಡಿದ್ದೆ. ಈಗ ಅವರು ನಮಗೆ ಬೆಂಬಲ ನೀಡುತ್ತಿದ್ದಾರೆ. ನಾವು ಅವರ ಬೆಂಬಲವನ್ನು ಒಪ್ಪಿದ್ದೇವೆ. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ, ಅದಕ್ಕೆ ಕಾಂಗ್ರೆಸ್ ಬೆಂಬಲದಿಂದ ಶಕ್ತಿ ಬರಲಿದೆ ಎಂದರು.
ಇನ್ನು ಸಿಎಂ ಯಡಿಯೂರಪ್ಪ ನೀನು ನಿಂತಿರುವ ಬಸ್ಸಿನಲ್ಲಿ ಕೂತಿದ್ದೀಯಪ್ಪ.. ಆ ಡಕೋಟ ಎಕ್ಸ್‌ಪ್ರೆಸ್‌ನಲ್ಲಿ ಕೂತು ಕೊಳ್ಳೆ ಹೊಡೆಯುತ್ತಿದ್ದೀರಾ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಎಂಟಿವಿ ನಾಗರಾಜ್ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವನು. ಅವನು ಜನಪ್ರತಿನಿಧಿಗಳ ಪ್ರತಿನಿಧಿಯಾಗಲು ಸಾಧ್ಯವಿಲ್ಲ. ಇನ್ನು ಶರತ್ ಅವರಿಗೆ ಬಿಜೆಪಿ ವಿರುದ್ಧ ಹೋರಾಟಕ್ಕೆ ನಮ್ಮ ಬೆಂಬಲ ಬೇಕು ಅದಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಭರವಸೆ ನೀಡಿದರು.
ಶರತ್ ಬಚ್ಚೇಗೌಡ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ ಹೀಗಾಗಿ ಅವರು ಯಾವುದೇ ಪಕ್ಷ ಸೇರ್ಪಡೆಯಾಗಲು ಸಾಧ್ಯವಿಲ್ಲ ಅದಕ್ಕೆ ಪಕ್ಷಾಂತರ ನಿಷೇಧ ಕಾಯಿದೆ ಅಡಿ ಬರುತ್ತದೆ. ಹೀಗಾಗಿ ಅವರು ಸ್ವತಂತ್ರ ಶಾಸಕರಾಗಿ ಉಳಿಯುತ್ತಾರೆ. ಆದರೆ ಯಾವ ಪಕ್ಷಕ್ಕಾದರೂ ಬಾಹ್ಯಬೆಂಬಲ ಕೊಡಬಹುದು ವಿಧಾನಸಭೆಯಲ್ಲಿ ಬೆಂಬಲ ನೀಡಬಹುದು ಹೀಗಾಗಿ ಅವರು ನಮಗೆ ಬಾಹ್ಯಬೆಂಬಲ ಘೋಷಿಸಿ ಪತ್ರ ನೀಡಿದ್ದಾರೆ ಅವರು ಕಾಂಗ್ರೆಸ್ ಶಾಸಕಾಂಗ ಸಭೆಗೂ ಬೆಂಬಲ ನೀಡುತ್ತಾರೆ. ನಾನು ಅವರ ಬೆಂಬಲ ಸ್ವೀಕರಿಸಿದ್ದೇನೆ ಎಂದರು.
ಕಾಂಗ್ರೆಸ್‌ಗೆ ಸಹ ಸದಸ್ಯರಾಗಿ ಸೇರ್ಪಡೆಯಾದ ಬಳಿಕ ಮಾತನಾಡಿದ ಶರತ್ ಬಚ್ಚೇಗೌಡ ಯಾರ ಗರ್ವದಿಂದಲೂ ನಾಯಕರು ಹುಟ್ಟಲು ಸಾಧ್ಯವಿಲ್ಲ. ಜನರ ಆಶೀರ್ವಾದದಿಂದ ಮಾತ್ರ ನಾಯಕನಾಗಲು ಸಾಧ್ಯ. ನಮ್ಮ ಕ್ಷೇತ್ರದ ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. 2019ರ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದೆ. ರಾಜ್ಯ ಮತ್ತು ದೇಶದ ಘಟನೆಗಳು ಹೊಸಕೋಟೆ ಮೇಲೆ ಪರಿಣಾಮ ಬೀರುತ್ತಿವೆ. ಹೊಸಕೋಟೆಯಲ್ಲಿ ಅನೇಕ ರೀತಿಯ ಶಿಷ್ಟಾಚಾರ ಉಲ್ಲಂಘನೆ ಆಗುತ್ತಿದೆ. ಎಲ್ಲಾ ರೀತಿಯ ಪರಿಹಾರಗಳಿಗೆ ನಾನು ಈ ನಿರ್ಧಾರ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಬೆಂಬಲ ಕೋರುತ್ತಿದ್ದೇನೆ, ವಿಪಕ್ಷನಾಯಕ ನಾಯಕರಿಗೂ ನಾನು ಬೆಂಬಲ ನೀಡುತ್ತೇನೆ ಎಂದು ಹೇಳಿದರು.
ಶಾಸಕ ಶರತ್ ಅವರ ತಂದೆ ಬಿ.ಎನ್. ಬಚ್ಚೇಗೌಡ ಅವರು ಭಾರತೀಯ ಜನತಾ ಪಕ್ಷದ ಸಂಸದರಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ಮುಖಂಡರಾಗಿದ್ದ ಶರತ್ 2019ರಲ್ಲಿ ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.