ಬೆಂಗಳೂರು: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿಬಂದಿದೆ. ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದ ಸಿಎಂ ಯಡಿಯೂರಪ್ಪ ಜ. 13ರಂದು ಸಂಪುಟ ವಿಸ್ತರಣೆಯಾಗುವ ಮಾಹಿತಿ ನೀಡಿದ್ದರು. ಆದರೆ, ಇಂದು ಮತ್ತೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದು, ಜ. 13 ಅಥವಾ 14ರಂದು ಸಂಪುಟ ವಿಸ್ತರಣೆಯಾಗಬಹುದು. ಸಂಪುಟ ವಿಸ್ತರಣೆಯಾಗುತ್ತದಾ ಅಥವಾ ಪುನಾರಚನೆ ಆಗುತ್ತದಾ ಎಂಬುದನ್ನು ನೀವೇ ಕಾದು ನೋಡಿ ಎಂದು ಹೇಳಿದ್ದಾರೆ.
ನಿನ್ನೆ ತರಾತುರಿಯಲ್ಲಿ ದೆಹಲಿಗೆ ದೌಡಾಯಿಸಿದ್ದ ಮುಖ್ಯಮಂತ್ರಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆದುಕೊಂಡು ಬಂದಿದ್ದಾರೆ. ಬಿಜೆಪಿ ನಾಯಕರಾದ ಜೆ.ಪಿ ನಡ್ಡಾ, ಅರುಣ್ ಸಿಂಗ್ ಅವರ ಅನುಕೂಲತೆ ನೋಡಿಕೊಂಡು, ಅವರ ಸಮಯಾವಕಾಶ ಕೇಳಿಕೊಂಡು ನೂತನ ಸಚಿವರ ಪ್ರಮಾಣ ವಚನ ಸಮಾರಂಭ ಮಾಡುತ್ತೇವೆ. 7 ಜನರನ್ನು ಸಂಪುಟಕ್ಕೆ ಹೊಸದಾಗಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಯಡಿಯೂರಪ್ಪ ಗೊಂದಲದ ಹೇಳಿಕೆ ನೀಡಿದ್ದಾರೆ.
ಇನ್ನು ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟ ಮಾಹಿತಿ ನೀಡದ ಸಿಎಂ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ನಾಯಕರತ್ತ ಬೆರಳು ತೋರಿಸಿದ್ದಾರೆ. ಸಂಪುಟ ವಿಸ್ತರಣೆಗೆ ಜೆ.ಪಿ ನಡ್ಡಾ, ಅರುಣ್ ಸಿಂಗ್ ಬರಬೇಕಾ? ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಇದ್ದರೆ ಸಾಕಲ್ಲವೇ? ಸಿಎಂ ಒತ್ತಡದಲ್ಲಿ ಈ ರೀತಿ ಹೇಳಿಕೆ ನೀಡುತ್ತಿದ್ದಾರಾ? ಸಿಎಂಗೆ ಒತ್ತಡ ಹಾಕಿದ್ದು ಯಾರು? ಎಂಬಿತ್ಯಾದಿ ಅಂಶಗಳು ತೀವ್ರ ಕುತೂಹಲ ಕೆರಳಿಸಿವೆ.
ದೆಹಲಿಯ ಬಿಜೆಪಿ ನಾಯಕರು ನಾನು ಹೇಳಿದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒಪ್ಪಿದ್ದಾರೆ. ಯಾರೆಲ್ಲ ಸಂಪುಟ ಸೇರುತ್ತಾರೆ ಎಂಬುದನ್ನು ಇಂದು ತೀರ್ಮಾನ ಮಾಡುತ್ತೇವೆ ಎಂದಿದ್ದರು. ಸಂಪುಟ ವಿಸ್ತರಣೆಯ ರೂಪುರೇಷೆಗಳು ಇಂದು ಮಧ್ಯಾಹ್ನದೊಳಗೆ ಸ್ಪಷ್ಟಗೊಳ್ಳಲಿದೆ.
ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಖಚಿತವಿದೆ. ಸಿ.ಪಿ. ಯೋಗೇಶ್ವರ್, ಉಮೇಶ್ ಕತ್ತಿ ಮೊದಲಾದವರ ಹೆಸರು ದಟ್ಟವಾಗಿ ಕೇಳಿಬರುತ್ತಿದೆ. ಒಟ್ಟಾರೆ ಸಂಕ್ರಾಂತಿಯೊಳಗೆ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.