ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ಹೊತ್ತಲ್ಲೇ ಸಚಿವ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಅದಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ಇನ್ನು ಆರ್.ಆರ್.ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಹೊರಬೀಳುವ ಮೊದಲೇ, ಸಂಪುಟ ವಿಸ್ತರಣೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿಯ ಹಲವು ಶಾಸಕರು ಲಾಬಿ ಆರಂಭಿಸಿದ್ದಾರೆ.
ಅಲ್ಲದೆ ಸಿ.ಟಿ. ರವಿ ರಾಜೀನಾಮೆಯಿಂದ ತೆರವಾದ ಸ್ಥಾನವೂ ಸೇರಿ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಿಗೆ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಪಕ್ಷದ ವರಿಷ್ಠರ ಮೇಲೆ ಪ್ರಭಾವ ಬಳಸಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ದೆಹಲಿ ಮಟ್ಟದಲ್ಲಿ ಕೆಲವರು ಲಾಬಿ ಕೂಡ ಆರಂಭಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್ ಮತ್ತು ಆರ್. ಶಂಕರ್ ಅವರೂ ದೆಹಲಿಗೆ ತೆರಳಿ ಟಿಕಾಣಿ ಹೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಹಾಲಿ ಸಂಪುಟದಲ್ಲಿ ಸಚಿವರಾಗಿರುವ ಕೆಲವರ ಕಾರ್ಯ ವೈಖರಿ ಬಗ್ಗೆ ವರಿಷ್ಠರು ಸಮಾಧಾನ ಹೊಂದಿದ್ದಾರೆ. ಸರ್ಕಾರದಲ್ಲಿದ್ದೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಮತ್ತು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲೂ ಯಾವ ಕೊಡುಗೆಯೂ ಇಲ್ಲಎಂಬುದನ್ನು ಗಮನಿಸುತ್ತಿದ್ದಾರೆ. ಇನ್ನುಅಂಥವರನ್ನು ಕೈಬಿಡುವ ಬಗ್ಗೆ ವರಿಷ್ಠರು ಸೂಚಿಸಿದರೆ ಮಾತ್ರ ಸಂಪುಟ ಪುನಾರಚನೆ ಆಗಬಹುದು. ಇಲ್ಲವಾದರೆ ವಿಸ್ತರಣೆ ಅಷ್ಟೇ ಎನ್ನಲಾಗುತ್ತಿದೆ.
ಸರ್ಕಾರ ರಚಿಸಲು ಕಾರಣರಾದವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ಯಡಿಯೂರಪ್ಪ ಈಗಾಗಲೇ ಮಾತು ನೀಡಿದ್ದಾರೆ. ಉಪ ಚುನಾವಣೆ ನಡೆದ ದಿನವೇ ಕರೆ ಮಾಡಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜತೆ ಯಡಿಯೂರಪ್ಪ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದೂ ಹೇಳಲಾಗಿದೆ.
ಇನ್ನು ಉಪ ಚುನಾವಣೆ ನಡೆದಿರುವ ಎರಡೂ ಕ್ಷೇತ್ರಗಳ ಮತ ಎಣಿಕೆ ಮಂಗಳವಾರ (ನ. 10) ನಡೆಯಲಿದೆ. ಈ ನಡುವೆ ಗೆದ್ದೇ ಗೆಲ್ಲುವೇ ಎಂಬ ವಿಶ್ವಾಸದಲ್ಲಿಆರ್.ಆರ್.ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕೂಡಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಅವರ ಜತೆಗೆ ಸರ್ಕಾರ ರಚಿಸಲು ಕಾರಣರಾದ ಎಂಟಿಬಿ ನಾಗರಾಜ್ ಕೂಡಾ ಸಂಪುಟದಲ್ಲಿ ಸ್ಥಾನ ಸಿಗುವ ಕನಸು ಕಾಣುತ್ತಿದ್ದಾರೆ. ಹಿರಿಯ ಶಾಸಕ ಉಮೇಶ ಕತ್ತಿ, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರೂ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.