ಬೆಂಗಳೂರು: ಗೆಳೆಯ ಅಂಬರೀಷ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಸಂದರ್ಭದಲ್ಲಿ ಅವರ ಪುಣ್ಯಭೂಮಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಇಂದು ಅಂಬರೀಷ್ ಅವರ ಮೂರನೇ ವರ್ಷದ ಪುಣ್ಯತಿಥಿ ಹಿನ್ನೆಲೆ ಕಂಠೀರವ ಸ್ಟುಡಿಯೋಗೆ ಬಂದು ಪುಷ್ಪಾರ್ಪಣೆ ಮಾಡಿದ ಅವರು, ಅಂಬರೀಷ್ ಅವರೊಂದಿಗಿನ ಸ್ನೇಹವನ್ನು ತಿಳಿಸಿದರು.
ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ಚಂದನವನದ ಹಿರಿಯ ನಟ ಅಂಬರೀಷ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬರೀಷ್ ಇಲ್ಲವಾಗಿ 3 ವರ್ಷವಾಗಿದೆ. ಸ್ಮಾರಕ ಸೇರಿ ಎಲ್ಲೂ ಅಂಬರೀಷ್ ಅವರ ಹೆಸರು ಕೇಳಿಬಂದಿಲ್ಲ ಎಂದು ಅಭಿಮಾನಿಗಳ ಬೇಸರದ ಬಗ್ಗೆ ಹೇಳಿದರು.
ಅಭಿಮಾನಿಗಳಿಗೆ ಈ ಬಗ್ಗೆ ನೋವಿದೆ. ಅದಕ್ಕೆ ಹೋರಾಟ ಮಾಡ್ತೀವಿ ಅಂತಿದ್ದಾರೆ. ಆದರೆ ಹೋರಾಟದ ಸಮಯ ಇದಲ್ಲ ಎಂದು ಹೇಳಿದ್ದೀನಿ. ಅಪ್ಪು ಅಗಲಿಕೆಯ ನೋವು ಎಲ್ಲರನ್ನೂ ಕಾಡಿದೆ. ಈ ಸಮಯದಲ್ಲಿ ಹೋರಾಟ ಮಾಡಬಾರದು ಎಂದಿದ್ದೇನೆ ಎಂದರು.
ಅಂಬರೀಷ್ ಅವರು ಯಾವ ಪ್ರಶಸ್ತಿ, ಹೆಸರನ್ನು ಕೇಳಿ ಪಡೆದಿರಲಿಲ್ಲ. ನಾವೂ ಸಹ ಅಂಬರೀಷ್ ಅವರಿಗೆ ಪ್ರಶಸ್ತಿ ಕೊಡಿ, ಅದು ಮಾಡಿ, ಇದು ಮಾಡಿ ಎಂದು ಕೇಳಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅಂಬಿ ತುಂಬಾ ಒಳ್ಳೇಯ ಸ್ನೇಹಿತರಾಗಿದ್ದರು. ಈಗ ಅವರೇ ಸಿಎಂ ಆಗಿರೋದ್ರಿಂದ ಮಾಡ್ತಾರೆ ಅನ್ನೋ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಗ ಅಭಿಷೇಕ್, ರಾಕ್ ಲೈನ್ ವೆಂಕಟೇಶ್, ಅಂಬರೀಷ್ ಅವರ ಅಪಾರ ಅಭಿಮಾನಿಗಳು 3ನೇ ಪುಣ್ಯತಿಥಿ ಹಿನ್ನೆಲೆ ಕಂಠೀರವ ಸ್ಟುಡಿಯೋಗೆ ಬಂದು ನಮನ ಸಲ್ಲಿಸಿದರು.