ತುಮಕೂರು: ಕೆ.ಆರ್. ಪೇಟೆಯಲ್ಲಿ ಹಣ ಹಂಚಿದಂತೆ ಶಿರಾದಲ್ಲೂ ಬಿಜೆಪಿಯವರು ಮತದಾರರ ಮನೆಬಾಗಿಲಿಗೆ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಈ ವಿಚಾರ ಪೊಲೀಸ್ ಇಲಾಖೆ, ಚುನಾವಣಾ ಆಯೋಗಕ್ಕೆ ಗೊತ್ತಿದ್ದರೂ ಅವುಗಳು ಕಣ್ಣುಮುಚ್ಚಿ ಕೂತಿರುವುದೇಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಶಿರಾ ವಿಧಾನಸಭೆ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ. ಜಯಚಂದ್ರ ಪರ ಪ್ರಚಾರ ನಡೆಸಿ ಮಾತನಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಸಾಲ ಮಾಡಿ ಜನರಿಗೆ ಹೋಳಿಗೆ ತಿನ್ನಿಸುತ್ತಿದೆ ಎಂದು ಬಿಜೆಪಿಯವರು ವ್ಯಂಗ್ಯವಾಡುತ್ತಿದ್ದರು. ಈಗಿನ ಬಿಜೆಪಿ ಸರ್ಕಾರ ನಮಗಿಂತ ದುಪ್ಪಟ್ಟು ಸಾಲ ಮಾಡಿದೆ, ಹೋಗಲಿ ಅದನ್ನು ಜನರಿಗಾದ್ರೂ ಉಪಯೋಗಿಸ್ತಿದ್ದಾರಾ, ಅದೂ ಇಲ್ಲ. ಸಾಲ ಮಾಡಿ ತಾವೇ ಹೋಳಿಗೆ ತಿನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಚುನಾವಣಾ ಭಾಷಣದಲ್ಲಿ ವಂಶಪಾರಂಪರ್ಯ ಭ್ರಷ್ಟಾಚಾರ ಗೆದ್ದಲು ಇದ್ದಂತೆ ಅಂದಿದ್ದಾರೆ, ಅವರ ಹೇಳಿಕೆ ಗಮನಿಸಿದರೆ ಬಹುಶಃ ಯಡಿಯೂರಪ್ಪನವರ ಆಡಳಿತವನ್ನು ನೋಡಿಯೇ ಈ ರೀತಿ ಹೇಳಿದ್ದಾರೆ ಅಂತ ನನಗನ್ನಿಸುತ್ತಿದೆ ಎಂದರು.
ಭ್ರಷ್ಟಾಚಾರ ರಹಿತ ಹಾಗೂ ಪಾರದಾರ್ಶಕ ಆಡಳಿತವನ್ನು ರಾಜ್ಯದ ಜನ ನಿರೀಕ್ಷಿಸಿದ್ದರು, ಆದರೆ ಸಿಎಂ ಬಿಎಸ್‌ವೈ ಸರ್ಕಾರ ಭ್ರಷ್ಟಾಚಾರವನ್ನೇ ಪಾರದರ್ಶಕವಾಗಿ ಮಾಡುತ್ತಿದೆ. ಯಡಿಯೂರಪ್ಪ ಕುಟುಂಬ ಜೆಸಿಬಿ ಮೂಲಕ ಹಣ ಗೋರುತ್ತಿದೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಎಂದು ಪ್ರಶ್ನಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದನ್ನು ಬಿಟ್ಟು ಬಿಎಸ್‌ವೈ ಸರ್ಕಾರ ಹೊಸದಾಗಿ ಒಂದೇ ಒಂದು ಕಾರ್ಯಕ್ರಮವನ್ನು ಜಾರಿಮಾಡಿಲ್ಲ. ದುರಂತವೆಂದರೆ ನಮ್ಮ ಹಲವು ಕಾರ್ಯಕ್ರಮಗಳಿಗೂ ಅನುದಾನ ನೀಡದೆ ಇತಿಶ್ರೀ ಹಾಡಿದ್ದೇ ಸರ್ಕಾರದ ಈ ವರೆಗಿನ ಸಾಧನೆ ಎಂದು ಕುಟುಕಿದರು.