- ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಬ್ರಿಟನ್ನಿನ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಹಾಗೂ ಫಾರ್ಮಾ ದೈತ್ಯ ಸಂಸ್ಥೆಯಾದ ಆಸ್ಟ್ರಾಜೆನೆಕಾದ ವಿಜ್ಞಾನಿಗಳ ಸಹಯೋಗದೊಂದಿಗೆ ಭಾರತದ ಸೆರಮ್ ಇನ್ಸ್ಟಿಟ್ಯೂಟ್ ಸಂಸ್ಥೆ ಒಟ್ಟಿಗೆ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ವ್ಯಾಕ್ಸಿನ್ ಬಳಕೆಗೆ ಅನುಮತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಸಬ್ಜಕ್ಟ್ ಎಕ್ಸಫರ್ಟ್ ಕಮಿಟಿ ಆನ್ ಕೋವ್ಯಾಕ್ಸಿನ್ (ಎಸ್‌ಇಸಿ) ಸಭೆ ನಡೆಯಲಿದೆ.
ಸಬ್ಜಕ್ಟ್ ಎಕ್ಸಫರ್ಟ್ ಕಮಿಟಿ ಈಗಾಗಲೇ ಎರಡು ಬಾರಿ ಸಭೆ ನಡೆಸಿ ಕೋವಿಶೀಲ್ಡ್ ವ್ಯಾಕ್ಸಿನ್ ತಯಾರಿಕೆ ಬಗ್ಗೆ ಸೆರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳಿಂದ ಹೆಚ್ಚಿನ ಮಾಹಿತಿ ಕೇಳಿತ್ತು. ವಿಶೇಷವಾಗಿ ಕೋವಿಶೀಲ್ಡ್ ಲಸಿಕೆ ಸೇವಿಸಿದ ನಂತರ ಆಗುವ ಪರಿಣಾಮ ಹಾಗೂ ಸುರಕ್ಷತೆ ಬಗ್ಗೆ ಹೆಚ್ಚುವರಿ ಮಾಹಿತಿ ಕೇಳಿತ್ತು. ಹೀಗಾಗಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು ಕೋವಿಶೀಲ್ಡ್ ವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡುವ ಬಗ್ಗೆ ಚರ್ಚೆಯಾಗಲಿದೆ.
ಇದಾದ ಮೇಲೆ ಸಬ್ಜಕ್ಟ್ ಎಕ್ಸಫರ್ಟ್ ಕಮಿಟಿಯ ಶಿಫಾರಸು ಆಧರಿಸಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ)ಕ್ಕೆ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ನಿರ್ಧಾರ ಜನವರಿ ಮೊದಲ ವಾರದಲ್ಲೇ ಪ್ರಕಟವಾಗುವ ಸಾಧ್ಯತೆಗಳಿವೆ.
ಇಂದಿನ ಸಭೆಯಲ್ಲಿ ಸೆರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಸಬ್ಜಕ್ಟ್ ಎಕ್ಸಫರ್ಟ್ ಕಮಿಟಿ ತಜ್ಞರ ಎದುರು ಕೋವಿಶೀಲ್ಡ್ ಲಸಿಕೆ ಸೇವಿಸಿದ ನಂತರ ಆಗುವ ಪರಿಣಾಮ ಹಾಗೂ ಸುರಕ್ಷತೆ ಬಗ್ಗೆ ಹೆಚ್ಚುವರಿ ಮಾಹಿತಿ ಸಲ್ಲಿಸಲಿವೆ. ಈ ಮಾಹಿತಿಗಳನ್ನು ಆಧರಿಸಿ ಸಬ್ಜಕ್ಟ್ ಎಕ್ಸಫರ್ಟ್ ಕಮಿಟಿಯು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ಕ್ಕೆ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಬಹುದೋ ಬೇಡವೋ ಎಂಬ ಶಿಫಾರಸು ಮಾಡಬೇಕಾಗುತ್ತದೆ. ಬಹುತೇಕ ಇಂದೇ ಶಿಫಾರಸು ಆಗುವ ಸಂಭವ ಕಂಡುಬರುತ್ತಿದೆ.
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದ ನಂತರ ಕೇಂದ್ರ ಆರೋಗ್ಯ ಇಲಾಖೆಯು ಕೋವಿಶೀಲ್ಡ್ ಲಸಿಕೆ ಬಳಸಲು ಆರಂಭಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಕೋವಿಶೀಲ್ಡ್ ವಿತರಣಾ ಪ್ರಕ್ರಿಯೆಯ ಬಗ್ಗೆ ಪರಿಶೀಲನೆ ನಡೆಸಲು ಇದೇ ಡಿಸೆಂಬರ್ 28 ಮತ್ತು 29ರಂದು ಪ್ರಾಯೋಗಿಕವಾಗಿ ಆಂಧ್ರ ಪ್ರದೇಶ, ಅಸ್ಸಾಂ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ಡ್ರೈ ರನ್ ನಡೆಸಿತ್ತು. ಜನವರಿ 2ರಂದು ದೇಶದ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎರಡೆರಡು ನಗರಗಳಲ್ಲಿ ಡ್ರೈ ರನ್ ನಡೆಸುತ್ತಿದೆ.
ತುರ್ತು ಬಳಕ ಏಕೆ?ಆಕ್ಸ್ಫರ್ಡ್ ಇನ್ಸ್ಟಿಟ್ಯೂಟ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯ ಅಧ್ಯಯನ ಇನ್ನೂ ಪೂರ್ಣಗೊಂಡಿಲ್ಲವಾದರೂ ಕೋವಿಡ್ ಸಂಕಷ್ಟ ಇರುವ ಹಿನ್ನೆಲೆಯಲ್ಲಿ ತುರ್ತು ಬಳಕೆಗೆ ಲಸಿಕೆ ಉತ್ಪಾದನೆ ಮಾಡಲು ಅನುಮತಿ ಕೋರಿ ಮನವಿ ಮಾಡಲಾಗಿದೆ.