ಮೈಸೂರು: ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಚಾಮುಂಡಿಯ ಪಲ್ಲಕ್ಕಿ ರಥ ಎಳೆಯುವ ಮೂಲಕ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಾನು ಹೊತ್ತಿದ್ದ ಹರಕೆಯನ್ನು ತೀರಿಸಿದ್ದಾರೆ.
ನಾಡಹಬ್ಬ ದಸರಾ ಯಶಸ್ವಿಯಾಗಲೆಂದು ರೋಹಿಣಿ ಸಿಂಧೂರಿ ಹರಕೆ ಹೊತ್ತಿದ್ದರು. ದಸರಾ ಹೊತ್ತಿನಲ್ಲೇ ಮೈಸೂರಿಗೆ ಡಿಸಿಯಾಗಿ ಆಗಮಿಸಿದ್ದ ಹಿನ್ನೆಲೆಯಲ್ಲಿ ದಸರಾ ಸುಸೂತ್ರವಾಗಿ ನಡೆಯುವಂತೆ ಹರಕೆ ಹೊತ್ತಿದ್ದರು.
ನಿನ್ನೆ ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ರೋಹಿಣಿ ಕುಟುಂಬ ಸಂಜೆ ಬೆಟ್ಟಕ್ಕೆ ತೆರಳಿ ರಥ ಎಳೆದಿದೆ. ಇದಕ್ಕೂ ಮೊದಲು ನವರಾತ್ರಿಯ 9 ನೇ ದಿನ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ್ದಾರೆ.
ಕೊರೊನಾದಿಂದಾಗಿ ಈ ಬಾರಿ ಜಂಬೂ ಸವಾರಿ ಕೇವಲ 500 ಮೀಟರ್‌ಗೆ ಸೀಮಿತವಾಗಿತ್ತು. ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಕೇವಲ 23 ನಿಮಿಷದಲ್ಲಿ ಮುಕ್ತಾಯಗೊಂಡಿತು. ನಾಡದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಇದೇ ಮೊದಲ ಬಾರಿಗೆ ಹೊತ್ತ ಅಭಿಮನ್ಯು, ಐದೂವರೆ ಕಿ.ಮೀ. ದೂರದ ಬನ್ನಿಮಟ್ಟಪದ ಬದಲಿಗೆ ಅರಮನೆ ಆವರಣದಲ್ಲಿ 500 ಮೀಟರ್ ಮಾತ್ರ ಹೆಜ್ಜೆ ಹಾಕಿದ್ದಾನೆ.