ಬೆಂಗಳೂರು: ಸಾರಿಗೆ ನೌಕರರ ವಿರುದ್ಧ ಮುಷ್ಕರದ ವೇಳೆ ನಗರದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಸಂಬಂಧ ಶನಿವಾರ ನಗರದ ಸಿಟಿ ಸಿವಿಲ್ ನ್ಯಾಯಾಲಯದ 59ನೇ ಹಾಲ್‌ನಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆಯ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು 11 ಮಂದಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ 11 ಮಂದಿ ಸಾರಿಗೆ ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಶನಿವಾರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯದಲ್ಲಿ ಕೈಗೆತ್ತಿಕೊಳ್ಳಲಾಯಿತು. ಈ ವೇಳೆ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದರು.
ಆರೋಪಿಗಳ ಪರ ವಕಾಲತು ವಹಿಸಿದ ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು 11ಮಂದಿಯೂ ಬಿಎಂಟಿಸಿಯ ನೌಕರರಾಗಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇನ್ನು ಈ ಎಲ್ಲಾ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದಿಲ್ಲ. ಆದ್ದರಿಂದ ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ದಾಖಲಿಸಿರುವ ದೂರು ಸುಳ್ಳಿನಿಂದ ಕೂಡಿರುತ್ತದೆ. ಹೀಗಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಬೇಕು ಎಂದು ವಾದ ಮಂಡಿಸಿದರು.
ಈ ಆರೋಪಿಗಳಿಗೆ ಜಾಮೀನು ದೊರೆತಲ್ಲಿ ಅವರು ಮುಂದೆ ಕರ್ತವ್ಯ ಮಾಡಲು ತುಂಬ ಅನುಕೂಲಕರವಾಗುತ್ತದೆ ಎಂದು ನ್ಯಾಯಾಧೀಶರ ಮುಂದೆ ವಕೀಲರು ಮನವಿ ಮಾಡಿಕೊಂಡಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ನೌಕರರಿಂದ ಶುಲ್ಕ ಪಡೆಯದೆ ವಕಾಲತು ವಹಿಸಿರುವ ವಕೀಲ ಎಚ್.ಬಿ.ಶಿವರಾಜು
ಬೆಂಗಳೂರಿನ ವಿವಿಧ ನ್ಯಾಯಾಲಯಗಳು ಸೇರಿದಂತೆ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಸಾರಿಗೆ ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಎಲ್ಲಾ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿಸಿದ್ದಾರೆ.
ಈ ಪ್ರಕರಣಗಳ ಸಂಬಂಧ ವಕೀಲರು ನೌಕರರಿಂದ ಯಾವುದೇ ಶುಲ್ಕ ಪಡೆಯದೆ ಮಾನವೀಯತೆ ಮೆರೆದಿದ್ದಾರೆ. ಇದರ ಜತೆಗೆ ರಾಜ್ಯ ಹೈ ಕೊರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣಗಳಿಗೂ ಯಾವುದೇ ಶುಲ್ಕ ಪಡೆಯದೆ ನೌಕರರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಿದ್ದಾರೆ.
super sir vakil shivaraj sir thank you sir 🙏🙏🙏