ಬೆಂಗಳೂರು: ಬಿಎಂಟಿಸಿ 28ನೇ ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಮದ್ ಇಸ್ಮೈಲ್ ಅವರು ಸಾರಿಗೆ ನೌಕರರು ಆರಂಭಿಸಿ ಮುಷ್ಕರದ ವೇಳೆ ವಜಾಗೊಂಡಿದ್ದಾರೆ.
ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡದ ಹಿನ್ನೆಲೆಯಲ್ಲಿ ಅವರು ಇಂದು ಜೀನವ ನಿರ್ವಾಹಣೆಗಾಗಿ ಭಿಕ್ಷೆ ಬೇಡುತ್ತಿರುವುದರ ಬಗ್ಗೆ ತಿಳಿದುಕೊಂಡ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಮಹಮದ್ ಇಸ್ಮೈಲ್ ಅವರಿಗೆ ಧನಸಹಾಯ ಮಾಡಿದ್ದಾರೆ.
ಬುಧವಾರ ಹೈ ಕೋರ್ಟ್‌ನಲ್ಲಿ ತುರ್ತುವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವಕೀಲರಿಗೆ ಬಿಎಂಟಿಸಿ ನೌಕರರು ವಿಷಯ ತಿಳಿಸಿದ್ದಾರೆ. ಕೂಡಲೇ ವಕೀಲರು ಮಹಮದ್ ಇಸ್ಮೈಲ್ ಅವರಿದ್ದ ಹೆಬ್ಬಾಳಕ್ಕೆ ಬಾಡಿಗೆ ಕಾರು ಕಳುಹಿಸಿ ಅವರನ್ನು ಕೂಡಲೇ ಬ್ಯಾಂಕ್ ಕಾಲೋನಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡು ಅವರಿಗೆ ದೊಡ್ಡ ಮಟ್ಟಲ್ಲಿ ಆರ್ಥಿಕ ಸಹಾಯ ಮಾಡಿದರು.
ಜತೆಗೆ ಈ ರೀತಿ ಭಿಕ್ಷೆ ಬೇಡುವುದರಿಂದ ನಿಮ್ಮ ಕುಟುಂಬದ ಮತ್ತು ಸಂಸ್ಥೆಯ ಗೌರವಕ್ಕೆ ಚ್ಯುತಿ ಬರುತ್ತದೆ ಈರೀತಿ ಮಾಡದೇ ನಿಮಗೆ ಹಣದ ಅವಶ್ಯವಿದ್ದರೆ ಕೂಡಲೇ ನಮ್ಮನ್ನು ಭೇಟಿ ಮಾಡಿ ನಮ್ಮ ಕೈಯಲ್ಲಿ ಆಗುವ ಸಹಾಯ ಮಾಡುತ್ತೇವೆ ಎಂದು ಬುದ್ಧಿ ಮಾತನ್ನು ಹೇಳಿ ಕಳುಹಿಸಿದ್ದಾರೆ.
ಇನ್ನು ಹಲವಾರು ಕಾರಣಗಳಿಂದ ಹೈ ಕೋರ್ಟ್‌ನಲ್ಲಿರುವ ಸಾರಿಗೆ ನೌಕರರ ಪ್ರಕರಣವನ್ನು ಕೈ ಬಿಟ್ಟಿದ್ದರೂ ನೌಕರರು ಕಷ್ಟದಲ್ಲಿ ಸಿಲುಕಿದ್ದಾರೆ ಎಂದ ಕೂಡಲೇ ಅವರಿಗೆ ಆರ್ಥಿಕ ಸಹಾಯ ಮಾಡುವತ್ತ ಮನಸ್ಸು ತುಡಿಯುತ್ತಿರುವುದು ವಕೀಲರ ಸಾಮಾಜಿಕ ಕಾಳಜಿಯನ್ನು ತೋರಿಸುತ್ತದೆ. ಅವರು ನಮ್ಮ ಪಾಲಿಗೆ ದೇವರ ಸ್ವರೂಪ ಎಂದು ಚಾಲಕ ಇಸ್ಮೈಲ್ ತಿಳಿಸಿದ್ದಾರೆ.
ಈ ನಡುವೆ ಏ.7ರಿಂದ ಸಾರಿಗೆ ನೌಕರರು ಆರಂಭಿಸಿದ ಅನಿರ್ಷ್ಟಾವಧಿ ಮುಷ್ಕರದಲ್ಲೂ ಮಹಮದ್ ಇಸ್ಮೈಲ್ 2ದಿನ ಡ್ಯೂಟಿ ಮಾಡಿರುವುದು ತಿಳಿದು ಬಂದಿದೆ. ಬಳಿಕ ಅವರಿಗೆ ಆರೋಗ್ಯ ಸಮಸ್ಯೆ ಬಿಗಡಾಯಿಸಿದ್ದರಿಂದ ಡ್ಯೂಟಿಗೆ ಹೋಗಲು ಸಾಧ್ಯವಾಗಿಲ್ಲ.
ಇದನ್ನು ಅಸ್ತ್ರವಾಗಿ ಬಳಸಿಕೊಂಡ ಬಿಎಂಟಿಸಿಯ ಅಧಿಕಾರಿಗಳು ಮಹಮದ್ ಇಸ್ಮೈಲ್ ಅವರನ್ನು ಮೊದಲು ಅಮಾನತು ಮಾಡಿ ನಂತರ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಅಕ್ಷರಸಹ ಬೀದಿಗೆ ಬಿದ್ದ ಚಾಲಕನ ಕುಟುಂಬ ಜೀವನ ನಿರ್ವಾಹಣೆಗಾಗಿ ಬೇರೆ ದಾರಿ ಕಾಣದೆ ಭಿಕ್ಷೆ ಬೇಡುವ ಕಾಯಕಕ್ಕೆ ಇಳಿದಿದೆ.
ಮಹಮದ್ ಇಸ್ಮೈಲ್ ಅವರು ಅಂದು ಬಿಎಂಟಿಸಿ ಚಾಲಕ ಇಂದು ಭಿಕ್ಷುಕ ಎಂದು ಇರುವ ಒಂದು ಬೋರ್ಟ್ ನೇತುಹಾಕಿಕೊಂಡು ಭಿಕ್ಷೆ ಬೇಡುತ್ತಿದ್ದರು.