ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹೊರಮಾವು ವಾರ್ಡ್ ನ ಬಿ.ಡಿ.ಎಸ್ ನಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಹ ನೀರಿನ ಸಮಸ್ಯೆ ಆಗಿಂದಾಗ್ಗೆ ಆಗುತ್ತಿದೆ. ಸಚಿವ ಬಸವರಾಜ ಬೈರತಿಯವರು ಮಳೆನೀರಿನಿಂದಾಗಿರುವ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಜನರಿಗೆ ಪರಿಹಾರ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಯಲಹಂಕ ಮತ್ತು ಹೆಬ್ಬಾಳ ವ್ಯಾಲಿಯಿಂದ ಮಳೆನೀರು ಕೆ.ಆರ್.ಪುರಂ, ಮಹದೇವಪುರದ ಮೂಲಕ ಹೋಗುತ್ತದೆ. ರೈಲ್ವೆ ಬ್ಲಾಕೇಡ್ ನಿಂದ ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ. ಹೆಬ್ಬಾಳ ವ್ಯಾಲಿ ನೀರು 125 ಅಡಿ ಅಗಲ ಇರುವ ಚರಂಡಿಯಿಂದ ಬರುತ್ತಿದೆ. ಅದನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆ.
ಆದರೆ ರೈಲ್ವೆ ವೆಂಟ್ ಬಹಳ ಚಿಕ್ಕದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿದುಬಂದಾಗ 10-12 ಅಡಿ ನೀರು ಹೊರಗೆ ಹರಿಯುತ್ತಿದೆ. ಅದಕ್ಕಾಗಿ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳೊಂದಿಗೆ ಇಂದೇ ಮಾತನಾಡಿ , ಇದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿ ರೈಲ್ವೆ ವೆಂಟ್ನ್ನು ವಿಸ್ತರಿಸಿ ಸಂಪೂರ್ಣವಾಗಿ ನೀರು ಹೋಗಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಅರ್ಕಾವತಿ ಲೇಔಟ್ ಬಳಿ ಬಿಡಿಎ ವತಿಯಿಂದ ಇನ್ನೊಂದು ರೈಲ್ವೇ ವೆಂಟ್ ನ್ನು ಮಾಡಲಾಗುತ್ತಿದ್ದು, ಬಿಡಿಎ ದವರು ಮಾಡಲು ಸೂಚಿಸಲಾಗಿದೆ. ಅದಕ್ಕೆ ಮುಂದುವರಿದ ಆರ್ ಸಿಸಿ ಲೈನಿಂಗ್ ನ ಚರಂಡಿ ವ್ಯವಸ್ಥೆಯನ್ನೂ ಕಲ್ಕೆರೆಗೆ ಮುಟ್ಟಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.
ನಾಗೇನಹಳ್ಳಿ ಕೆರೆಯಿಂದ ಬರುವ ಮುಖ್ಯ ಡ್ರೈನ್ನ್ನು ಅಗಲೀಕರಣಗೊಳಿಸಿ 3.5 ಕಿಮೀ ವರೆಗೆ ನಿರ್ಮಿಸಿ ಹೆಬ್ಬಾಳ ವ್ಯಾಲಿಗೆ ಸೇರಿಸುವ ಕಾಮಗಾರಿಯನ್ನು ಸದ್ಯದಲ್ಲಿಯೇ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.