ವಿಜಯಪಥ ಸಮಗ್ರ ಸುದ್ದಿ
ಬನ್ನೂರು: ಕೊರೊನಾ ಮಹಾಮಾರಿ ಹೋಬಳಿಯಲ್ಲಿ ತನ್ನ ರೌದ್ರನರ್ತನ ತೋರುತ್ತಿದ್ದು, ಒಂದೇ ಶಾಲೆಯ 19 ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಪಾಲಕರಲ್ಲಿ ಆತಂಕ ಹೆಚ್ಚಿಸಿದೆ.
ಒಂದು ವಾರದಿಂದ ಬನ್ನೂರು ಸಂತೇಮಾಳದಲ್ಲಿರುವ ವಿವೇಕಾನಂದ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ವಿಭಾಗದ 8, 9 ಮತ್ತು 10ನೇ ತರಗತಿಯ 18 ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಅವರನ್ನು ಈಗಾಗಲೇ ಐಸೋಲೇಷನ್ ಮಾಡಲಾಗಿದೆ.
ಆದರೆ, 18 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡು ಸಾವಿರಾರು ಮಕ್ಕಳು ಒಂದೇ ಸೂರಿನಡಿ ವ್ಯಾಸಂಗ ಮಾಡುತ್ತಿದ್ದರೂ ಅವರಿಗೆ ಯಾವುದೇ ರೀತಿಯ ಸೋಂಕು ಬಾರದಂತೆ ತಡೆಯಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಶಾಲೆ ಆಡಳಿತ ಮಂಡಳಿ ಮತ್ತು ಆರೋಗ್ಯ ಇಲಾಖೆ ತೆಗೆದುಕೊಂಡಿದೆ ಎಂದು ತಿ.ನರಸೀಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಕೆ. ರವಿಕುಮಾರ್ ವಿಜಯಪಥಕ್ಕೆ ತಿಳಿಸಿದ್ದಾರೆ.
ಹೀಗಾಗಿ ಶಾಲೆಗೆ ಎಂದಿನಂತೆ ಇಂದು (ಬುಧವಾರ) ಕೂಡ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಆದರೂ ಪಾಲಕರಲ್ಲಿ ಆತಂಕ ಮನೆ ಮಾಡಿದೆ.
ಇನ್ನು ಪುರಸಭೆ ಅಧಿಕಾರಿಗಳು ಶಾಲೆಯಲ್ಲಿ ಯಾವರೀತಿಯಲ್ಲಿ ಮಕ್ಕಳಿಂದ ಮಕ್ಕಳಿಗೆ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಈಗಾಗಲೇ ಶಾಲೆಗೆ ಭೇಟಿನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಮಾ.17ರಿಂದ ಮಾ.20ರವರೆಗೆ 18 ಮಕ್ಕಳಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, ಆ ಎಲ್ಲ ಮಕ್ಕಳನ್ನು ಹೋಂ ಐಸೋಲೇಷನ್ ಮಾಡಲಾಗಿದೆ. ಇನ್ನು ಆ ಶಾಲೆಯಲ್ಲಿ ಕಲಿಯುತ್ತಿರುವ 1450 ಮಕ್ಕಳಿಗೂ ಕೊರೊನಾ ಟೆಸ್ಟ್ ಮಾಡಿಸಿದ್ದು ಎಲ್ಲರಲ್ಲೂ ಕೊರೊನಾ ನೆಗಿಟೀವ್ ಬಂದಿದೆ. ಹೀಗಾಗಿ ಶಾಲೆಯನ್ನು ಶೀಲ್‌ಡೌನ್ ಮಾಡುವ ಅಗತ್ಯವಿಲ್ಲ.
l ಡಾ.ಎಂ.ಕೆ. ರವಿಕುಮಾರ್ ತಿ.ನರಸೀಪುರ ತಾಲೂಕು ಆರೋಗ್ಯ ಅಧಿಕಾರಿ