ಬೆಂಗಳೂರು ಗ್ರಾಮಾಂತರ: ಕೋವಿಡ್ ಮೂರನೇ ಅಲೆ ಎದುರಿಸಲು ಮುಂಜಾಗ್ರತಾ ಕ್ರಮವಾಗಿ ದೊಡ್ಡಬಳ್ಳಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸಿಎಸ್ಆರ್ ನಿಧಿಯಡಿ ರೂ 4 ಕೋಟಿ ವೆಚ್ಚದಲ್ಲಿ 70 ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಿರುವುದು ರಾಜ್ಯದಲ್ಲಿಯೇ ಪ್ರಥಮ ಹಾಗೂ ವಿನೂತನವಾಗಿದ್ದು, ದೇಶದಲ್ಲಿಯೇ ಅತಿ ಶೀಘ್ರವಾಗಿ ನಿರ್ಮಾಣಗೊಂಡ ಮೊದಲ ಮೇಕ್ ಶಿಫ್ಟ್ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ 70 ಬೆಡ್ ಸಾಮರ್ಥ್ಯದ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ದೊಡ್ಡಬಳ್ಳಾಪುರ ಗ್ರಾಮೀಣ ಭಾಗದ ಜನರಿಗೆ ಈ ಆಸ್ಪತ್ರೆ ಸಹಕಾರಿಯಾಗಲಿದ್ದು, ಕೋವಿಡ್ ನಂತರವೂ ಸಾರ್ವಜನಿಕರ ಸೇವೆಗೆ ಸಹಕಾರಿಯಾಗಲಿದೆ ಎಂದ ಅವರು, ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಿದ ಕಂಪನಿಗಳಿಗೆ ಸರ್ಕಾರದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ಹಲವಾರು ಕ್ರಮಗಳಿಂದಾಗಿ ಕೋವಿಡ್ ಸೋಂಕು ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತವು ‘ವೈದ್ಯರ ನಡೆ-ಹಳ್ಳಿ ಕಡೆ’ ಹಾಗೂ ‘ತಜ್ಞ ಮಕ್ಕಳ ವೈದ್ಯರ ನಡೆ-ಹಳ್ಳಿ ಕಡೆ’ ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜಾರಿಗೆ ತಂದು, ವೈದ್ಯರೇ ಜನರ ಬಳಿಗೆ ತೆರಳಿ ಆರೋಗ್ಯ ಪರೀಕ್ಷೆ ನಡೆಸಿರುವುದು ಶ್ಲಾಘನೀಯ ಎಂದರು.
ಕೋವಿಡ್ ತಡೆಗಟ್ಟಲು ಎಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಈಗಾಗಲೇ ಅನ್ ಲಾಕ್ ಮಾಡಲಾಗಿರುವ ಹಿನ್ನೆಲೆ, ಜನರು ಎಚ್ಚರಿಕೆಯಿಂದ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಪಾಲಿಸಬೇಕು, ತಪ್ಪಿದಲ್ಲಿ ಮತ್ತೆ ಕಠಿಣ ನಿಯಮಗಳನ್ನು ತರಲಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ದೊಡ್ಡಬಳ್ಳಾಪುರಕ್ಕೆ ಅಗತ್ಯವಿರುವ ಸೌಲಭ್ಯಗಳ ಕುರಿತು ಶಾಸಕರು ಗಮನಕ್ಕೆ ತಂದಿದ್ದು, ಹಣಕಾಸಿನ ಸಾಧ್ಯತೆ ಗಮನಿಸಿ, ಪ್ರಾಮಾಣಿಕವಾಗಿ ತಾಲೂಕಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್. ನಾಗರಾಜು(ಎಂ.ಟಿ.ಬಿ) ಮಾತನಾಡಿ, ಕೋವಿಡ್-19 ಸೋಂಕಿನಿಂದ ಎಲ್ಲೆಡೆ ಅನಾಹುತಗಳು ಸಂಭವಿಸಿದ್ದು, ಈ ಸಂದರ್ಭದಲ್ಲಿ ಸರ್ಕಾರದ ಜೊತೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕೈಜೋಡಿಸುವ ಮೂಲಕ ಕೊರೊನಾ ಮಹಾಮಾರಿಯನ್ನು ತೊಲಗಿಸಲು ಸಹಕರಿಸಿ ಎಂದರು.
ಕಂದಾಯ ಸಚಿವ ಆರ್. ಅಶೋಕ ಮಾತನಾಡಿ, ಜಿಲ್ಲೆಯ ಮೂರು ತಾಲೂಕುಗಳಲ್ಲಿ ವೈದ್ಯಕೀಯ ಕಾಲೇಜುಗಳಿವೆ ಆದರೆ ದೊಡ್ಡಬಳ್ಳಾಪುರದಲ್ಲಿ ಯಾವುದೇ ವೈದ್ಯಕೀಯ ಕಾಲೇಜು ಇಲ್ಲವಾದ್ದರಿಂದ, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ದೊಡ್ಡಬಳ್ಳಾಪುರಕ್ಕೆ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ನೀಡಬೇಕು ಎಂದು ಸರ್ಕಾರವನ್ನು ಮನವಿ ಮಾಡಿದ್ದ ಹಿನ್ನೆಲೆ, ಮೇಕ್ ಶಿಫ್ಟ್ ಆಸ್ಪತ್ರೆ ಮಂಜೂರು ಮಾಡಿ, ಇಂದು ನಿರ್ಮಾಣಗೊಂಡಿರುವ ಅದೇ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ಸಿಎಂ ಅವರು ಉದ್ಘಾಟಿಸಿರುವುದು ಸಂತಸದ ಸಂಗತಿ ಎಂದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ತಾಲೂಕಿನಲ್ಲಿ ಏಳು ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಬಯಲು ಸೀಮೆಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದ್ದು, ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವ ಮೂಲಕ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಬೇಕು ಎಂದರಲ್ಲದೆ, ನಾಯಂಡನಹಳ್ಳಿಯ ವೃಷಭಾವತಿ ನದಿಯ ಸಂಸ್ಕರಿಸಿದ ನೀರನ್ನು ದೊಡ್ಡಬಳ್ಳಾಪುರಕ್ಕೆ ಹರಿಸಬೇಕು ಎಂದು ಮನವಿ ಮಾಡಿದರು.
ತಾಲೂಕಿಗೆ ವೈದ್ಯಕೀಯ ಕಾಲೇಜು, ನರ್ಸಿಂಗ್ ತರಬೇತಿ ಸಂಸ್ಥೆ, ಸಾಸಲು ಹೋಬಳಿಗೆ ಪದವಿ ಪೂರ್ವ ಕಾಲೇಜು, ಕಸಬಾ ಹಾಗೂ ಸಾಸಲು ಹೋಬಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.