ಶಬ್ದಬ್ರಹ್ಮ, ಭಾಷಾ ನಿಘಂಟು ತಜ್ಞ ಗಂಜಾಂನ ಪ್ರೊ.ಜಿ.ವೆಂಕಟಸುಬ್ಬಯ್ಯ ಇನ್ನಿಲ್ಲ
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ‘ಶಬ್ದಬ್ರಹ್ಮ’ನೆಂದೇ ಖ್ಯಾತಿ ಪಡೆದಿರುವ ಹಿರಿಯ ಸಾಹಿತಿ, ಭಾಷಾ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ (108) ಅವರು ಬೆಂಗಳೂರಿನಲ್ಲಿ ಇಂದು ತಡರಾತ್ರಿ ನಿಧನರಾಗಿದ್ದಾರೆ.
ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ತಡರಾತ್ರಿ 1.15ಕ್ಕೆ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಒಂದು ವಾರದ ಹಿಂದಷ್ಟೇ ಮೂತ್ರನಾಳದ ಸೋಂಕಿಗೆ ಒಳಗಾಗಿದ್ದ ಅವರನ್ನು ಶಾಂತಿ ಸರ್ಜಿಕಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿತ್ತು. ಆದರೆ ರಾತ್ರಿ ವಯೋಸಹಜವಾಗಿ ಅಸ್ವಸ್ಥರಾಗಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ
ಚಾಮರಾಜಪೇಟೆಯ ಚಿತಾಗಾರದಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಅಂತ್ಯಕ್ರಿಯೆ ನಡೆಯಲಿದ್ದು, ಜಯನಗರ 7ನೇ ಬ್ಲಾಕ್‌ನ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಪ್ರೊ.ಜಿ.ವೆಂಕಟಸುಬ್ಬಯ್ಯ 1913ರ ಆಗಸ್ಟ್ 13ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಜನಿಸಿದ್ದರು. ಭಾಷಾ ತಜ್ಞ, ಸಂಶೋಧಕ, ಬರಹಗಾರ, ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ‘ಕನ್ನಡ ನಿಘಂಟು ಶಾಸ್ತ್ರ ಪರಿಚಯ’ ಇವರ ಶ್ರೇಷ್ಠ ಗ್ರಂಥ.
ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು
ಈ ಹಿಂದೆ ವೆಂಕಟ ಸುಬ್ಬಯ್ಯನವರು ಬೆಂಗಳೂರಿನಲ್ಲಿ 2011ರ ಫೆಬ್ರುವರಿ 4ರಿಂದ 6ರವರೆಗೆ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಪ್ರಶಸ್ತಿಗೆ ಕನ್ನಡದ ಕೆ.ಜಿ.ನಾಗರಾಜಪ್ಪ ಅವರ ಚಿಂತನಶೀಲ ಬರಹ ಮಾಲಿಕೆಯಾದ ‘ಅನುಶ್ರೇಣಿ- ಯಜಮಾನಿಕೆ’ ವಿಮರ್ಶಾ ಕೃತಿ ಆಯ್ಕೆಯಾಗಿತ್ತು. ವೆಂಕಟಸುಬ್ಬಯ್ಯ ಅವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ವತಿಯಿಂದ ದಕ್ಷಿಣ ಭಾರತ ವಿಭಾಗಕ್ಕೆ ನೀಡಲಾಗುವ 2016-17ನೇ ಸಾಲಿನ ಭಾಷಾ ಸಮ್ಮಾನ್ ಪ್ರಶಸ್ತಿ ಪಡೆದಿದ್ದರು.