ಬೆಂಗಳೂರು: ರಾಜ್ಯದ ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಕಾಳಜಿಯುಳ್ಳ ನಾಯಕ ಎಂ.ರವಿಶಂಕರ್ ಅವರು ಇಂದು ಆಮ್ ಆದ್ಮಿ ಪಾರ್ಟಿ ಸೇರಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಎಂ.ರವಿಶಂಕರ್ ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನವರು. ಬಿಇ ಪದವೀಧರರು ಹಾಗೂ ಪಿಜಿಡಿಎಂ ಸ್ನಾತಕೋತ್ತರ ಪದವೀಧರರಾದ ಇವರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಕೆಎಎಸ್ ಅಧಿಕಾರಿಯಾಗಿ 38 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.
ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಅರಮನೆಯ ಜನಪ್ರತಿನಿಧಿಗಾಗಿ ಕಾರ್ಯನಿರ್ವಹಿಸುತ್ತಿದ್ದ ದಿವಂಗತ ಲೋಕಸೇವಾಸಕ್ತ ವೇಮ ರೆಡ್ಡಿಯವರ ವಂಶಸ್ಥರು. ಇವರ ಸೋದರ ಮಾವನವರಾದ ಪಿ.ಎನ್.ರೆಡ್ಡಿಯವರು ಮಾಲೂರು ಕ್ಷೇತ್ರದ ಶಾಸಕರಾಗಿ ಜನಪರ ಸೇವೆ ಸಲ್ಲಿಸಿದ್ದರು.
ಮಾಜಿ ಮುಖ್ಯಮಂತ್ರಿ ಧರಂ ಸಿಂಗ್‌ರವರು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ರವಿಶಂಕರ್ ಅವರ ಖಾಸಗಿ ಕಾರ್ಯದರ್ಶಿಯಾಗಿದ್ದರು. ಹೀಗೆ ಅಪಾರ ರಾಜಕೀಯ ಅನುಭವ ಹೊಂದಿರುವ ಇವರ ಸೇರ್ಪಡೆಯಿಂದ ಎಎಪಿಯ ಬಲ ಇನ್ನಷ್ಟು ಹೆಚ್ಚಾಗಿದೆ.
ಎಂ.ರವಿಶಂಕರ್ ಮಾಲೂರು ತಾಲೂಕಿನ ಲಕ್ಕೂರು ಹೋಬಳಿಯಲ್ಲಿ ಪಿಪಿಎಂ ಶಾಲೆಯನ್ನು ನಡೆಸಿ, ಶೈಕ್ಷಣಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಕೋಲಾರ ಜಿಲ್ಲೆಯಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಇವರ ಶಾಲೆ ಹೆಸರಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಲಾಗುತ್ತಿದೆ.
ಈ ಹಿಂದೆ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಹತ್ತಾರು ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿಯ ತಾಂತ್ರಿಕ ಸಮಿತಿ ಹಾಗೂ ಅಬಕಾರಿ ಇಲಾಖೆಯ ತಾಂತ್ರಿಕ ತಜ್ಞ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಪ್ರಸ್ತುತ, ಕರ್ನಾಟಕ ರಾಜ್ಯ ಗ್ರೂಪ್-ಎ ಗೆಜೆಟೆಡ್ ಅಧಿಕಾರಿಗಳ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಸರ್ಕಾರಿ ಪ್ರೆಸ್ ದಿನಗೂಲಿ ಮತ್ತು ಗುತ್ತಿಗೆ ನೌಕರರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ಜನಪರ ತತ್ತ್ವ ಸಿದ್ಧಾಂತಗಳು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರವರ ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರರಹಿತ ಆಡಳಿತವನ್ನು ಒಪ್ಪಿ ಅನೇಕ ಅಧಿಕಾರಿಗಳು, ಸಮಾಜ ಸೇವಕರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಪಕ್ಷವನ್ನು ಸೇರಿದ್ದಾರೆ. ಮುಂದೆಯೂ ಅನೇಕ ಗಣ್ಯರು ಸೇರಲಿದ್ದಾರೆ. ಎಎಪಿಗೆ ಕರ್ನಾಟಕದಲ್ಲಿ ನಿರೀಕ್ಷೆಗೂ ಮೀರಿದ ಜನಬೆಂಬಲ ದೊರೆಯುತ್ತಿರುವುದು ನಮ್ಮೆಲ್ಲರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಈಗ ಸೇರ್ಪಡೆಗೊಂಡಿರುವ ಎಂ.ರವಿಶಂಕರ್ ಅವರ ಶ್ರಮ-ಸಲಹೆ-ಸೂಚನೆಗಳೊಂದಿಗೆ ಪಕ್ಷವು ಇನ್ನಷ್ಟು ಭದ್ರವಾಗಿ ಬೇರೂರುವ ದೃಢ ವಿಶ್ವಾಸವಿದೆ.
ಈ ಸಂದರ್ಭದಲ್ಲಿ ರವಿಶಂಕರ್ ಅವರ ಪುತ್ರ ಋತ್ವಿಕ್ ಅವರು ಪಕ್ಷವನ್ನು ಸೇರಿದರು.
ಪಕ್ಷ ಸೇರ್ಪಡೆಯ ಈ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರೋಮಿ ಭಾಟಿ, ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ಪಕ್ಷದ ರಾಜ್ಯ ಉಪಸಂಚಾಲಕಿ ಮತ್ತು ಬಿಬಿಎಂಪಿ ಚುನಾವಣಾ ಉಸ್ತುವಾರಿ ಶಾಂತಲಾ ದಾಮ್ಲೆ, ಪಕ್ಷದ ಬೆಂಗಳೂರು ಘಟಕದ ಉಪಾಧ್ಯಕ್ಷ ಬಿ ಟಿ ನಾಗಣ್ಣ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಮತ್ತು ಪಕ್ಷದ ಇತರ ಮುಖಂಡರು ಉಪಸ್ಥಿತರಿದ್ದರು.